ಅಮೆರಿಕ : ಹಿಂಸಾತ್ಮಕ ಪ್ರತಿಭಟನೆಯಲ್ಲಿ ಐವರು ಪೊಲೀಸರಿಗೆ ಗುಂಡು

Update: 2020-06-02 16:08 GMT

ವಾಶಿಂಗ್ಟನ್/ಮಿನಪೊಲಿಸ್, ಜೂ. 2: ಪೊಲೀಸರ ಕಸ್ಟಡಿಯಲ್ಲಿ ಕರಿಯ ವ್ಯಕ್ತಿಯೊಬ್ಬರು ಮೃತಪಟ್ಟಿರುವುದನ್ನು ಪ್ರತಿಭಟಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ವೇಳೆ ಕನಿಷ್ಠ ಐವರು ಪೊಲೀಸರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಶಾಂತಿಯನ್ನು ಹತ್ತಿಕ್ಕಲು ಸೇನೆಯನ್ನು ಬಳಸಲಾಗುವುದು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಪ್ರತಿಭಟನಕಾರರು ಲಾಸ್ ಏಂಜಲೀಸ್‌ನಲ್ಲಿರುವ ಮಾಲ್ ಒಂದಕ್ಕೆ ಬೆಂಕಿ ಹಚ್ಚಿದರು, ನ್ಯೂಯಾರ್ಕ್ ನಗರದಲ್ಲಿರುವ ಅಂಗಡಿಗಳನ್ನು ಲೂಟಿ ಮಾಡಿದರು ಹಾಗೂ ಮಿಝೂರಿಯ ಸೇಂಟ್ ಲೂಯಿಸ್‌ನಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಸೇಂಟ್ ಲೂಯಿಸ್‌ನಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

‘‘ಪೊಲೀಸರು ಈಗಲೂ ಗುಂಡಿನ ದಾಳಿಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಳು ಲಭಿಸಿದಂತೆ ಒದಗಿಸಲಾಗುವುದು’’ ಎಂದು ಸೇಂಟ್ ಲೂಯಿಸ್ ಪೊಲೀಸರು ಟ್ವಿಟರ್‌ನಲ್ಲಿ ಹೇಳಿದರು.

ಲಾಸ್ ವೇಗಸ್‌ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ಓರ್ವ ಪೊಲೀಸ್ ಅಧಿಕಾರಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News