ಖೇಲ್‌ರತ್ನಕ್ಕೆ ಭಾರತ ಮಹಿಳಾ ಹಾಕಿ ನಾಯಕಿ ರಾಣಿ ರಾಂಪಾಲ್ ಹೆಸರು ಶಿಫಾರಸು

Update: 2020-06-02 18:03 GMT

ಹೊಸದಿಲ್ಲಿ, ಜೂ.2: ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಹೆಸರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ‘ಖೇಲ್‌ರತ್ನ’ ಪ್ರಶಸ್ತಿಗೆ, ವಂದನಾ ಕಟಾರಿಯ, ಮೋನಿಕಾ ಹಾಗೂ ಹರ್ಮನ್‌ಪ್ರೀತ್ ಸಿಂಗ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಹಾಕಿ ಇಂಡಿಯಾ ಮಂಗಳವಾರ ಶಿಫಾರಸು ಮಾಡಿದೆ.

ಜೀವಮಾನ ಸಾಧನೆಗೆ ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿಗಾಗಿ ಹಾಕಿ ಒಕ್ಕೂಟವು ಭಾರತದ ಮಾಜಿ ದಿಗ್ಗಜರಾದ ಆರ್.ಪಿ. ಸಿಂಗ್ ಹಾಗೂ ತುಷಾರ್ ಖಾಂಡ್ಕರ್ ಹೆಸರನ್ನು ಶಿಫಾರಸು ಮಾಡಿದೆ.

ಕೋಚ್‌ಗಳಾದ ಬಿ.ಜೆ. ಕರಿಯಪ್ಪ ಹಾಗೂ ರೊಮೇಶ್ ಪಥಾನಿಯಾರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಪರಿಗಣನೆಗೆ 2016ರ ಜನವರಿ 1ರಿಂದ ಡಿಸೆಂಬರ್ 31, 2019ರ ವರೆಗಿನ ಅವಧಿಯನ್ನು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ರಾಣಿ ಅವರು ಮಹಿಳಾ ಹಾಕಿ ತಂಡ 2017ರ ಏಶ್ಯಕಪ್‌ನಲ್ಲಿ ಐತಿಹಾಸಿಕ ಗೆಲುವು, 2018ರ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ನೇತೃತ್ವವಹಿಸಿದ್ದರು.2019ರ ಎಫ್‌ಐಎಚ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ನಿರ್ಣಾಯಕ ಗೋಲು ದಾಖಲಿಸಿ ಭಾರತವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ನೆರವಾಗಿದ್ದರು.

ಭಾರತ ತಂಡ ಎಫ್‌ಐಎಚ್ ವರ್ಲ್ಡ್‌ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 9ನೇ ಸ್ಥಾನಕ್ಕೇರಿದೆ.

‘ವರ್ಷದ ವಿಶ್ವ ಗೇಮ್ಸ್ ಅಥ್ಲೀಟ್’ಗೆ ನೇಮಕಗೊಂಡಿರುವ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದ ರಾಣಿ ಅವರು ಅರ್ಜುನ ಪ್ರಶಸ್ತಿ(2016) ಹಾಗೂ ಪದ್ಮ ಶ್ರೀ(2020)ಪ್ರಶಸ್ತಿಗೂ ಭಾಜನರಾಗಿದ್ದರು.

200ಕ್ಕೂ ಅಧಿಕ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಭಾರತದ ಸ್ಟ್ರೈಕರ್ ವಂದನಾ, 150 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಮೋನಿಕಾರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಈ ಇಬ್ಬರು ಆಟಗಾರ್ತಿಯರು 2019ರಲ್ಲಿ ಹಿರೋಶಿಮಾದಲ್ಲಿ ನಡೆದಿದ್ದ ಎಫ್‌ಐಎಚ್ ಸಿರೀಸ್ ಫೈನಲ್ಸ್, ಟೋಕಿಯೊ 2020 ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ಹಾಗೂ ಭುವನೇಶ್ವರದಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ತಂಡದ ಅಮೋಘ ಗೆಲುವಿನಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಭಾರತೀಯ ಪುರುಷರ ತಂಡದ ಡ್ರಾಗ್‌ಫ್ಲಿಕ್ ಸ್ಪೆಷಲಿಸ್ಟ್ ಹರ್ಮನ್‌ಪ್ರೀತ್ ಸಿಂಗ್ ಅರ್ಜುನ ಪ್ರಶಸ್ತಿಯ ನಾಮನಿರ್ದೇಶನದ ಅಂತಿಮ ಪಟ್ಟಿಯಲ್ಲಿದ್ದಾರೆ. ಒಡಿಶಾದಲ್ಲಿ ನಡೆದಿದ್ದ ಎಫ್‌ಐಎಚ್ ಫೈನಲ್ಸ್‌ನಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು.

2020ರ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಲ್ಲಿ ಖಾಯಂ ನಾಯಕ ಮನ್‌ಪ್ರೀತ್ ಸಿಂಗ್ ಅನುಪಸ್ಥಿತಿಯಲ್ಲಿ ಟೂರ್ನಿಯುದ್ದಕ್ಕೂ ಹರ್ಮನ್‌ಪ್ರೀತ್ ತಂಡದ ನಾಯಕತ್ವ ವಹಿಸಿದ್ದರು. ಕಳೆದ ವರ್ಷ ರಶ್ಯದ ವಿರುದ್ಧ ನಡೆದಿದ್ದ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಜಯಶಾಲಿಯಾಗಿದ್ದ ಭಾರತೀಯ ತಂಡದ ಭಾಗವಾಗಿದ್ದರು.

ಹಾಕಿ ಕ್ಷೇತ್ರದಲ್ಲಿ ನಿರಂತರ ಕೊಡುಗೆ ಸಲ್ಲಿಸುತ್ತಿರುವ ಭಾರತದ ಮಾಜಿ ಸ್ಟಾರ್‌ಗಳಾದ ಡಾ.ಆರ್.ಪಿ. ಸಿಂಗ್ ಹಾಗೂ ಖಾಂಡ್ಕರ್ ಅವರ ಹೆಸರನ್ನು ಮೇಜರ್ ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ದ್ರೋಣಾಚಾರ್ಯ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ಕರಿಯಪ್ಪ 2019ರಲ್ಲಿ ಸುಲ್ತಾನ್ ಆಫ್ ಜೊಹೊರ್ ಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಭಾರತೀಯ ಜೂನಿಯರ್ ಪುರುಷರ ತಂಡಕ್ಕೆ ಕೋಚಿಂಗ್ ನೀಡಿದ್ದರು.

ಕ್ರೀಡಾ ಸಚಿವಾಲಯದಿಂದ ರಚಿಸಲ್ಪಟ್ಟಿರುವ ಸಮಿತಿಯು ವಿವಿಧ ರಾಷ್ಟ್ರೀಯ ಒಕ್ಕೂಟಗಳಿಂದ ನಾಮನಿರ್ದೇಶನದ ಕಿರುಪಟ್ಟಿಯನ್ನು ಸ್ವೀಕರಿಸಲಿದೆ. ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ಪ್ರಶಸ್ತಿಗಳನ್ನು ಪ್ರದಾನಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News