ವಲಸೆ ಕಾರ್ಮಿಕರಿಗೆ ಆಹಾರ, ನೀರು ವಿತರಿಸಿದ ಕ್ರಿಕೆಟಿಗ ಶಮಿ

Update: 2020-06-02 18:31 GMT
 BCCI Photo

ಹೊಸದಿಲ್ಲಿ, ಜೂ.2: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ಹತೋಟಿಗೆ ತರಲು ಜಾರಿಗೆ ತರಲಾಗಿದ್ದ ಲಾಕ್‌ಡೌನ್‌ನಿಂದಾಗಿ ದುಸ್ಥಿತಿಗೆ ತಲುಪಿರುವ ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರು ತಮ್ಮೂರಿಗೆ ವಾಪಸಾಗುತ್ತಿದ್ದಾರೆ. ಬಡವರ ನೋವಿಗೆ ಸ್ಪಂದಿಸಿರುವ ಭಾರತದ ಕ್ರಿಕೆಟಿಗ ಮುಹಮ್ಮದ್ ಶಮಿ ಉತ್ತರಪ್ರದೇಶದಲ್ಲಿ ಬಸ್‌ಗಳ ಮೂಲಕ ತವರೂರಿಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಆಹಾರದ ಪೊಟ್ಟಣಗಳು ಹಾಗೂ ಮಾಸ್ಕ್‌ಗಳನ್ನು ವಿತರಿಸಿದರು.

29ರ ಹರೆಯದ ಶಮಿ ಉತ್ತರಪ್ರದೇಶದ ಸಹಸ್‌ಪುರದಲ್ಲಿರುವ ತಮ್ಮ ನಿವಾಸದ ಸಮೀಪ ಆಹಾರ ವಿತರಣೆಯ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಬಸ್ ಹೊರಡುವುದನ್ನು ಕಾಯುತ್ತಿದ್ದ ಕಾರ್ಮಿಕರ ಬಳಿ ತೆರಳಿದ ಶಮಿ ನೀರಿನ ಬಾಟಲ್ ವಿತರಿಸಿದರು. ಸುಮಾರು 200 ಜನರಿಗೆ ಆಹಾರ ಹಾಗೂ ಬಾಳೆಹಣ್ಣುಗಳನ್ನು ವಿತರಿಸಿದರು. ಉತ್ತರಪ್ರದೇಶದ ಅಮ್ರೋಹಾದ ಹೆದ್ದಾರಿಯ ಬಳಿ ವಲಸಿಗರಿಗೆ ಡೇರೆಗಳನ್ನು ಕಟ್ಟಲು ನೆರವಾಗಿದ್ದ ಶಮಿ ಆಹಾರ ಹಾಗೂ ನೀರನ್ನು ಪೂರೈಸಿದ್ದರು.

ಮಾಸ್ಕ್ ಹಾಗೂ ಕೈಗವಸು ಧರಿಸಿ ಜನರಿಗೆ ಆಹಾರ ವಿತರಿಸುತ್ತಿರುವ ಶಮಿಯವರ ವೀಡಿಯೊವನ್ನು ಹಂಚಿಕೊಂಡಿರುವ ಬಿಸಿಸಿಐ, ‘‘ಭಾರತ ಕೊರೋನ ವಿರುದ್ಧ ಹೋರಾಡುತ್ತಿದೆ. ತಮ್ಮ ಊರುಗಳಿಗೆ ತೆರಳಲು ಪ್ರಯತ್ನಿಸುತ್ತಿರುವ ಜನರಿಗೆ ನೆರವಾಗಲು ಮುಂದಾಗಿರುವ ಮುಹಮ್ಮದ್ ಶಮಿ ಉತ್ತರಪ್ರದೇಶದ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಆಹಾರ ಪೊಟ್ಟಣಗಳು ಹಾಗೂ ನೀರನ್ನು ವಿತರಿಸಿದ್ದಾರೆ. ಸಹಸ್‌ಪುರದಲ್ಲಿರುವ ತನ್ನ ಮನೆಯ ಸಮೀಪ ಆಹಾರ ವಿತರಣೆಯ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ’’ಎಂದು ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News