ವಿಡಿಯೋ ಚಾಟ್ ನಲ್ಲಿ ಝುಕರ್ಬರ್ಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಫೇಸ್ ಬುಕ್ ಉದ್ಯೋಗಿಗಳು

Update: 2020-06-03 11:41 GMT

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಶೇರ್ ಮಾಡಿದ ಕೆಲ ಪೋಸ್ಟ್‍ಗಳನ್ನು ಹಾಗೆಯೇ ಉಳಿಸಿಕೊಳ್ಳುವ ತಮ್ಮ ನಿರ್ಧಾರದ ಕುರಿತಂತೆ ಮನಸ್ಸು ಬದಲಾಯಿಸುವುದಿಲ್ಲ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಉದ್ಯೋಗಿಗಳ ಜತೆ ನಡೆಸಿದ ಸಭೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಟ್ರಂಪ್ ಅವರ ಟ್ವೀಟ್‍ಗಳು ಕಂಪೆನಿಯ ನೀತಿಗಳನ್ನು ಉಲ್ಲಂಘಿಸುತ್ತಿದೆ ಎಂದು ಹಲವು ಉದ್ಯೋಗಿಗಳ ಭಾವನೆಯಾಗಿದ್ದರೂ ಝುಕರ್ಬರ್ಗ್ ಅದಕ್ಕೆ ಮನ್ನಣೆ ನೀಡಿಲ್ಲ. ವೀಡಿಯೋ ಚಾಟ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಝುಕರ್ಬರ್ಗ್ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ಅದೇ ಸಮಯ ಲೂಟಿಕೋರರಿಗೆ ಗುಂಡಿಕ್ಕಲಾಗುವುದು ಎಂದು ಟ್ರಂಪ್ ಅವರು ಬೆದರಿಸಿ ಮಾಡಿರುವ ಟ್ವೀಟ್ ಈಗಲೂ ಫೇಸ್ ಬುಕ್‍ನಲ್ಲಿ ಕಾಣಿಸಿಕೊಂಡಿರುವುದಕ್ಕೆ ಹಲವು ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದೇಶ ಹಿಂಸೆಯನ್ನು ಪ್ರಚೋದಿಸುತ್ತದೆ ಎಂಬುದನ್ನು ಕಂಪೆನಿಯ ನೀತಿ ನಿಯಮಾವಳಿ ತಂಡಕ್ಕೆ ಸಂಪೂರ್ಣವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದುದರಿಂದ ಇದು ಫೇಸ್ ಬುಕ್ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ತಿಳಿಯಬಹುದು ಎಂದು ಝುಕರ್ಬರ್ಗ್ ಹೇಳಿದ್ದಾರೆಂದು ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ಮಾಹಿತಿ ನೀಡಿದ್ದಾರೆ.

ಫೇಸ್ ಬುಕ್ ನಿಯಮಗಳನ್ನು ಉಲ್ಲಂಘಿಸುವ ಪೋಸ್ಟ್ ಗಳನ್ನು ಪ್ರತ್ಯೇಕಿಸುವುದು ಹಾಗೂ ಅವುಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಾಗುವಂತೆ ಕಂಪೆನಿ ತನ್ನ ನಿಯಮಗಳಲ್ಲಿ ಬದಲಾವಣೆ ತರಬೇಕೇ ಎಂಬ ಕುರಿತೂ ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸುಮಾರು 90 ನಿಮಿಷಗಳ ಕಾಲ ಈ ಸಭೆ ನಡೆದಿತ್ತು.

“ಲೂಟಿ ಆರಂಭವೊಂಡಾಗ ಶೂಟಿಂಗ್ ಆರಂಭವಾಗುತ್ತದೆ'' ಎಂದು ಟ್ರಂಪ್ ಮೇ 28ರಂದು ಪೋಸ್ಟ್ ಮಾಡಿದ್ದರು, ಮಿನ್ನಿಯಾಪೊಲಿಸ್‍ನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿ ಪೊಲೀಸ್ ದೌರ್ಜನ್ಯದಿಂದ ಸಾವನ್ನಪ್ಪಿರುವುದರ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಗೆ ಪ್ರತಿಯಾಗಿ ಟ್ರಂಪ್ ಈ ರೀತಿ ಪೋಸ್ಟ್ ಮಾಡಿದ್ದರು.

ಇದಕ್ಕೆ ಫೇಸ್ ಬುಕ್ ಉದ್ಯೋಗಿಗಳಲ್ಲಿಯೇ ಭಾರೀ ಆಕ್ರೋಶ ಎದುರಾಗಿತ್ತಲ್ಲದೆ ಆ ಪೋಸ್ಟ್ ತೆಗೆದು ಹಾಕಬೇಕೆಂಬ ಒತ್ತಾಯವೂ ಇತ್ತು. ಸೋಮವಾರ ಕೆಲವರು ಕಚೇರಿಯಿಂದ ಪ್ರತಿಭಟನಾರ್ಥವಾಗಿ ಹೊರ ನಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News