ಪಿಪಿಇ ಕಿಟ್‌ನ ಕಳಪೆ ಗುಣಮಟ್ಟವನ್ನು ಟೀಕಿಸಿದ್ದ ಏಮ್ಸ್‌ನ ವೈದ್ಯರಿಗೆ ಶೋಕಾಸ್ ನೋಟಿಸ್

Update: 2020-06-03 14:17 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.3: ದಿಲ್ಲಿಯ ಏಮ್ಸ್‌ನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ -19 ಸೋಂಕನ್ನು ತಡೆಯಲು ಒದಗಿಸಲಾಗಿರುವ ವೈಯಕ್ತಿಕ ರಕ್ಷಣಾ ಉಪಕರಣ (ಪಿಪಿಇ) ಕಿಟ್‌ನ ಕಳಪೆ ಗುಣಮಟ್ಟವನ್ನು ಟೀಕಿಸಿದ್ದ ಹಿರಿಯ ರೆಸಿಡೆಂಟ್ ವೈದ್ಯರಿಗೆ ಆಸ್ಪತ್ರೆಯ ಆಡಳಿತ ವರ್ಗವು ಶೋಕಾಸ್ ನೋಟಿಸನ್ನು ಜಾರಿಗೊಳಿಸಿದೆ.

ಎನ್95 ಮಾಸ್ಕ್‌ಗಳ ಕುರಿತು ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಒದಗಿಸಿರುವ ಅಂಕಿಅಂಶಗಳು ಸುಳ್ಳುಗಳಿಂದ ಕೂಡಿವೆ ಎಂದೂ ಡಾ.ಶ್ರೀನಿವಾಸ ರಾಜಕುಮಾರ್ ಅವರು ಮೇ 25ರಂದು ಟ್ವೀಟಿಸಿದ್ದರು.

 ಡಾ.ಶ್ರೀನಿವಾಸ ಅವರು ತನ್ನ ಆರೋಪವನ್ನು ಬೆಂಬಲಿಸುವ ಯಾವುದೇ ವಿವರಗಳನ್ನು ನೀಡಿಲ್ಲ. ಏಮ್ಸ್‌ನಲ್ಲಿ ಹಿರಿಯ ರೆಸಿಡೆಂಟ್ ವೈದ್ಯರಾಗಿರುವ ಅವರು,ರೆಸಿಡೆಂಟ್ ವೈದ್ಯರ ಸಂಘ (ಆರ್‌ಡಿಎ)ದ ಕಾರ್ಯದರ್ಶಿಯೂ ಆಗಿದ್ದಾರೆ. ಇಂತಹ ಪ್ರಮುಖ ಹುದ್ದೆಗಳಲ್ಲಿರುವ ಅವರ ಮಾತುಗಳಿಗೆ ದೇಶದಲ್ಲಿಯ ಸಾರ್ವಜನಿಕರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಪ್ರಭಾವವನ್ನು ಬೀರುವ ಸಾಮರ್ಥ್ಯವಿದೆ. ಇಂತಹ ತಳಬುಡವಿಲ್ಲದ ಹೇಳಿಕೆಗಳು ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಉಡುಗಿಸುತ್ತವೆ ಮತ್ತು ತಮಗೆ ಲಭ್ಯವಿರುವ ರಕ್ಷಣೆಯನ್ನು ಅವರು ಅನುಮಾನಿಸುತ್ತಾರೆ ಎಂದು ಏಮ್ಸ್ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಿದೆ.

ಕಳೆದ ವಾರ ಶ್ರೀನಿವಾಸ ಅವರ ಹೇಳಿಕೆಗಳನ್ನು ಸುಳ್ಳು ಎಂದು ಬಣ್ಣಿಸಿದ್ದ ಆರ್‌ಡಿಎ ಅವರನ್ನು ತನ್ನ ಪ್ರ.ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟಿಸಿತ್ತು. ಆಡಳಿತದ ನಿರಂತರ ಒತ್ತಡದಿಂದಾಗಿ ತನ್ನನ್ನು ಉಚ್ಚಾಟಿಸಲಾಗಿದೆ ಎಂದು ತಿಳಿಸಿದ ಡಾ.ಶೀನಿವಾಸ ಅವರು,ತನ್ನ ಹೇಳಿಕೆಗೆ ತಾನು ಬದ್ಧನಾಗಿದ್ದೇನೆ. ತನ್ನ ಹೇಳಿಕೆಯನ್ನು ಪರಿಶೀಲಿಸಬಹುದಾಗಿದೆ ಮತ್ತು ಅದು ವಾಸ್ತವಾಂಶಗಳನ್ನು ಆಧರಿಸಿದೆ ಎಂದರು.

ಏಮ್ಸ್-ದಿಲ್ಲಿ ಕೊರೋನ ವೈರಸ್ ಸೋಂಕಿನಿಂದ ತೀವ್ರ ಪೀಡಿತ ಆಸ್ಪತ್ರೆಗಳ ಪೈಕಿ ಒಂದಾಗಿದ್ದು,ಫೆಬ್ರವರಿಯಿಂದೀಚಿಗೆ 200ಕ್ಕೂ ಅಧಿಕ ಸಿಬ್ಬಂದಿಗಳು ಸೋಂಕಿಗೆ ಗುರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News