ಕೊರೋನ ಸೊಂಕಿತರು ಸಾಮಾಜಿಕ ಕಳಂಕಿತರಲ್ಲ : ಡಾ.ಸುಧಾಕರ್

Update: 2020-06-03 16:17 GMT

ಉಡುಪಿ, ಜೂ.3: ವಿಶ್ವದಾದ್ಯಂತ ವ್ಯಾಪಿಸಿರುವ ಕೋವಿಡ್-19 ವೈರಸ್‌ನಿಂದ ಹರಡುವ ಬೇರೆ ಕಾಯಿಲೆಯಷ್ಟು ಗಂಭೀರ ಹಾಗೂ ಮಾರಕ ವಾದುದಲ್ಲ. ಇದೊಂದು ಸಾಮಾಜಿಕ ಪಿಡುಗಲ್ಲ. ಸೋಂಕಿತರು ಸಾಮಾಜಿಕ ಕಳಂಕಿತರಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಇದು ಸುಲಭದಲ್ಲಿ ಗುಣವಾಗುತ್ತದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣದ ಉಸ್ತುವಾರಿಗಳಲ್ಲೊಬ್ಬರಾಗಿರುವ ಡಾ.ಸುಧಾಕರ್, ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19ರ ನಿಯಂತ್ರಣದ ಕುರಿತ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಕೊರೋನಕ್ಕಿಂತ ಸಾರ್ಸ್ (ಶೇ.10) ಹಾಗೂ ಎಬೋಲಾ (ಶೇ.15) ಹೆಚ್ಚು ಮಾರಕವಾಗಿದೆ. ಅದಕ್ಕೆ ಹೋಲಿಸಿದರೆ ಕೊರೋನದಲ್ಲಿ ಸಾಯು ವವರ ಸಂಖ್ಯೆ ಒಟ್ಟು ಸೋಂಕಿತರಲ್ಲಿ ಶೇ.1.5ರಷ್ಟು ಮಾತ್ರ. ಹೀಗಾಗಿ ಮಾನವ ಉಳಿದೆಲ್ಲಾ ಕಾಯಿಲೆಗಳನ್ನು ಗೆದ್ದಂತೆ ಇದನ್ನೂ ಗೆದ್ದೇ ಗೆಲ್ಲುತ್ತಾನೆ. ಇದಕ್ಕಾಗಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶುಚಿತ್ವ ಇರಬೇಕು, ಆಗಾಗ ಕೈತೊಳೆದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಹಾಗೂ ಸುರಕ್ಷತಾ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸಚಿವರು ನುಡಿದರು.

ಉಳಿದೆಲ್ಲ ಕಾಯಿಲೆಗಳಿಗೆ ಹೋಲಿಸಿದರೆ ಇದರಲ್ಲಿ ಸೋಂಕಿತರ ಸಂಖ್ಯೆ 3-4 ಪಟ್ಟು ಅಧಿಕವಿದೆ. ಆದರೆ ಸಾಯುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ ಜನರು ಆತಂಕಿತರಾಗುವುದು ಬೇಡ. ಕೊರೋನಕ್ಕೆ ಚಿಕಿತ್ಸಾ ವಿಧಿವಿಧಾನ ಕಂಡುಕೊಳ್ಳುವವರೆಗೆ, ಲಸಿಕೆ ಕಂಡುಹಿಡಿಯುವರೆಗೆ ಜನರಲ್ಲಿ ಈ ಬಗ್ಗೆ ಎಚ್ಚರಿಕೆ ಇರಲಿ ಎಂದರು.

ಕೊರೋನ ನಾವು ಕರೆಯದೇ ಬಂದ ಅತಿಥಿ. ಸೋಂಕಿತರ ಸಂಖ್ಯೆಯಲ್ಲಿ ಉಡುಪಿ, ತಿಂಗಳ ಹಿಂದೆ 18ನೇ ಸ್ಥಾನದಲ್ಲಿದ್ದುದು ನಿನ್ನೆ ರಾಜ್ಯಕ್ಕೆ ಅಗ್ರಸ್ಥಾನ ಕ್ಕೇರಿದೆ. ಜಿಲ್ಲೆಯಲ್ಲಿ ಈಗಾಗಲೇ 410 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇವುಗಳಲ್ಲಿ 64 ಮಂದಿ ಗುಣಮುಖರಾಗಿ ತೆರಳಿದ್ದಾರೆ. ಕೇವಲ ಒಂದು ಸಾವು ಸಂಭವಿಸಿದೆ. 345 ಮಂದಿ ಈಗ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ಶೇ.98 ರಷ್ಟು ಮಂದಿಯಲ್ಲಿ ರೋಗ ಲಕ್ಷಣಗಳೇ ಇಲ್ಲ. ಹೀಗಾಗಿ ಎಲ್ಲರೂ ಶೀಘ್ರವೇ ಗುಣಮುಖರಾಗುತ್ತಾರೆ ಎಂದು ಸ್ವತಹ ವೈದ್ಯರಾಗಿರುವ ಡಾ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನ ವಿರುದ್ಧದ ಹೋರಾಟದಲ್ಲಿ ಸರಕಾರ, ರಾಜ್ಯದಲ್ಲಿದ್ದ ಎರಡು ಪ್ರಯೋಗಾಲಯವನ್ನು ಈಗ 64ಕ್ಕೇರಿಸಿದ್ದೇವೆ. ಇವುಗಳ ಮೂಲಕ ಇದುವರೆಗೆ 3,31,687 ಮಂದಿ ಶಂಕಿತ ಗಂಟಲುದ್ರವ ಮಾದರಿಯನ್ನು ಪರೀಕ್ಷಿಸಿದ್ದೇವೆ. ಇವುಗಳಲ್ಲಿ 3792 ಪ್ರಕರಣ ಮಾತ್ರ ಪಾಸಿಟಿವ್ ಆಗಿ ಬಂದಿದೆ. ಇದರಲ್ಲೂ ಶೇ.85ರಷ್ಟು ಜನರಲ್ಲಿ ರೋಗದ ಯಾವ ಲಕ್ಷಣಗಳೂ ಕಂಡುಬಂದಿಲ್ಲ. ಕೇವಲ ಶೇ.3ರಿಂದ 4ರಷ್ಟು ಜನರು ಮಾತ್ರ ಗಂಭೀರವಾಗಿದ್ದು ಐಸಿಯು ಚಿಕಿತ್ಸೆ ಪಡೆಯುತಿದ್ದಾರೆ ಎಂದರು.

ಇಡೀ ರಾಜ್ಯದಲ್ಲಿ ಉಸಿರಾಟದ ತೊಂದರೆ ಹಾಗೂ ಶೀತಜ್ವರದಿಂದ ನರಳುವವರನ್ನು ಗುರುತಿಸಿ ಅವರನ್ನು ಪರೀಕ್ಷೆಗೊಳಪಡಿಸಿ ಕಟ್ಟೆಚ್ಚರದಲ್ಲಿ ಇರಿಸಲಾಗುವುದು.

ನೀತಿ ನಿಯಮ ಬದಲು: ಕೊರೋನ ವಿರುದ್ಧ ವೈಜ್ಞಾನಿಕವಾದ ಕ್ರಮಕೈಗೊ ಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಳೆದ ಕೆಲವು ದಿನಗಳಿಂದ ಮಾರ್ಗ ಸೂಚಿಗಳಲ್ಲಿ ಕೆಲ ಬದಲಾವಣೆ ಮಾಡುತ್ತಿದೆ. ಹೊರರಾಜ್ಯ ಹಾಗೂ ಹೊರದೇಶಗಳಿಂದ ಬಂದವರನ್ನು ಕೇವಲ ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ಬಳಿಕ ಒಂದು ಹೋಮ್ ಕ್ವಾರಂಟೈನ್ ಇರಿಸುತಿದ್ದೇವೆ. ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ 410 ಪಾಸಿಟಿವ್ ಕೇಸುಗಳಲ್ಲಿ ಶೇ.98ರಷ್ಟು ಕೇಸು ಮುಂಬೈಯಿಂದ ಬಂದವರದ್ದು ಎಂದರು.

ರಾಜ್ಯ ಕ್ರಮಕ್ಕೆ ಮೆಚ್ಚುಗೆ: ಕೊರೋನ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ಕ್ರಮ ಕೇಂದ್ರ ಆರೋಗ್ಯ ಸಚಿವರ ಮೆಚ್ಚುಗೆಗೆ ಪಾತ್ರ ವಾಗಿದೆ. ಇದು ಉಳಿದ ರಾಜ್ಯಗಳಿಗೆ ಮಾದರಿ ಎಂದವರು ಪ್ರಶಂಸಿಸಿದ್ದಾರೆ ಎಂದರು.

ಈಗ ರಾಜ್ಯಾದ್ಯಂತ ನಾವು ಏಕರೂಪದ ಚಿಕಿತ್ಸೆಯನ್ನು ಅಳವಡಿಸಿಕೊಂಡಿ ದ್ದೇವೆ. ಪರಿಣಿತರು ಹಾಗೂ ತಜ್ಞರ ಸಮಿತಿಯನ್ನು ರಚಿಸಿ ನಾಲ್ಕು ಶಿಷ್ಟ್‌ಗಳಲ್ಲಿ ಕೆಲಸ ನಿರ್ವಹಿಸುತಿದ್ದೇವೆ. ಎರಡು ತಿಂಗಳು ರಾಜ್ಯಾದ್ಯಂತ ಲಾಕ್‌ಡೌನ್ ಮಾಡಿ ಸೋಂಕು ಹರಡುವ ಪ್ರಮಾಣವನ್ನು ತಗ್ಗಿಸಿದ್ದೇವೆ. ಆಗ ಸಿಕ್ಕಿದ ಕಾಲಾ ವಕಾಶದಲ್ಲಿ ಆರೋಗ್ಯ ವ್ಯವಸ್ಥೆಯೊಂದನ್ನು ರೂಪಿಸಿದ್ದೇವೆ ಎಂದು ಡಾ. ಸುಧಾಕರ್ ನುಡಿದರು.

ಕೆಲವು ಮಾರ್ಗಸೂಚಿಗಳನ್ನು ಬದಲಿಸಿ ನಗರ-ಗ್ರಾಮೀಣ ಎಂಬ ಎರಡು ವ್ಯವಸ್ಥೆ ಮಾಡಿ ಜಿಲ್ಲಾಡಳಿತದ ನೇತೃತ್ವದಲ್ಲಿ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಟಾಸ್‌ಕ್ಫೋರ್ಸ್ ರಚಿಸಿ ಅದರ ಉಸ್ತುವಾರಿಯಲ್ಲಿ ನಗರ ಪ್ರದೇಶದಲ್ಲಿ ವಾರ್ಡ್ ಮಟ್ಟದ ಟಾಸ್ಕ್‌ ಪೋರ್ಸ್ ರಚಿಸಿ ಕೊರೋನ ನಿಯಂತ್ರಣದ ಕಾರ್ಯ ನಡೆದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ದಿನಕರಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಸಿಇಒ ಪ್ರೀತ್ ಗೆಹ್ಲೋಟ್ ಉಪಸ್ಥಿತರಿದ್ದರು.

10 ಲಕ್ಷ ಸೋಂಕಿತರ ಚಿಕಿತ್ಸೆಗೆ ರಾಜ್ಯ ಸರ್ವಸನ್ನದ್ಧ

ಕೊರೋನ ನಿಯಂತ್ರಣದಲ್ಲಿ ರಾಜ್ಯ ಸರಕಾರ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಟ್ಟೆಚ್ಚರದಿಂದ ಹೋರಾಡುತ್ತಿದೆ.ರಾಜ್ಯದ ಸೋಂಕಿತರ ಸಂಖ್ಯೆ 10 ಲಕ್ಷಕ್ಕೇರಿದರೂ ಎಲ್ಲರಿಗೂ ಚಿಕಿತ್ಸೆ ನೀಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೀಗಾಗಿ ಜನರು ನಿರಾತಂಕರಾಗಿರುವಂತೆ ಸಚಿವರು ತಿಳಿಸಿದರು.

ಕೊರೋನ ಸೋಂಕಿತರಲ್ಲಿ ಈವರೆಗೆ ವಿಶ್ವದೆಲ್ಲೆಡೆ ಸಾವಿನ ಪ್ರಮಾಣ ಶೇ.1ರಿಂದ 1.5ಮಾತ್ರ. ಈ ಬಗ್ಗೆ ಇರುವ ಸಾಮಾಜಿಕ ಕಳಂಕವನ್ನು ತೊಡೆದು ಹಾಕಲು ಉಡುಪಿಯೇ ಮುಂಚೂಣಿಯಲ್ಲಿರಲಿ ಎಂದುವರು ಹಾರೈಸಿದರು.

ಸೋಂಕಿತರ ಮನೆ ಮಾತ್ರ ಸೀಲ್‌ಡೌನ್‌ಗೆ ಸಲಹೆ

ಇಂದಿನ ಸಭೆಯಲ್ಲಿ ಕೊರೋನ ನಿಯಂತ್ರಣದ ಕುರಿತಂತೆ ಜಿಲ್ಲೆಯ ಶಾಸಕರಿಂದ ವಿವಿಧ ಸಲಹೆ-ಸೂಚನೆಗಳು ಬಂದಿವೆ. ಅವುಗಳನ್ನು ರಾಜ್ಯ ದಲ್ಲಿ ಇರಿಸಿ ಸೂಕ್ತವೆನಿಸಿದವುಗಳನ್ನು ಮಾರ್ಗಸೂಚಿಯಲ್ಲಿ ಬದಲಾವಣೆಯೊಂದಿಗೆ ಅನುಷ್ಠಾನಗೊಳಿಸುತ್ತೇವೆ ಎಂದರು.

ಈಗಿರುವಂತೆ ಸೋಂಕಿತರೊಬ್ಬರು ಪತ್ತೆಯಾದರೆ ಆ ಪರಿಸರ ಹಾಗೂ ಗ್ರಾಮವನ್ನು ಸೀಲ್‌ಡೌನ್ ಮಾಡುವ ಬದಲು ಆ ವ್ಯಕ್ತಿಯ ಮನೆಯನ್ನು ಮಾತ್ರ ಸೀಲ್‌ಡೌನ್ ಮಾಡುವಂತೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಲಹೆ ನೀಡಿದ್ದು, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಅದೇ ರೀತಿ ಮುಂಬೈ ಸೇರಿದಂತೆ ಹೊರರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಆರೋಗ್ಯ ಪರೀಕ್ಷೆ ನಡೆಸಿ ಹೋಮ್ ಕ್ವಾರಂಟೈನ್ ಗೆ ಕಳುಹಿಸಬೇಕು ಎಂಬ ಸಲಹೆ ಬಂದಿದೆ. ಅಲ್ಲದೇ ಜಿಲ್ಲೆಯ ಬೇಡಿಕೆಯಾದ 2000 ಪಿಪಿಇ ಕಿಟ್‌ಗಳನ್ನು ಉಡುಪಿಗೆ ಕಳುಹಿಸಲು ಕೂಡಲೇ ನಿರ್ದೇಶನ ನೀಡುವುದಾಗಿ ಸಚಿವರು ತಿಳಿಸಿದರು. ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗುವ ಪ್ರಯೋಗಾಲಯ ಇನ್ನು 8-10 ದಿನದೊಳಗೆ ಕಾರ್ಯಾರಂಭ ಮಾಡಲಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಗ ಮಣಿಪಾಲ ಕೆಎಂಸಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ 1000ದಿಂದ 1200 ಸ್ಯಾಂಪಲ್‌ಗಳ ಪರೀಕ್ಷೆ ನಡೆಯಲು ಸಾಧ್ಯವಾಗಲಿದೆ ಎಂದರು.

ಈಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಳವಡಿಸಿದ ಮಾರ್ಗಸೂಚಿ ಗಳನ್ನೇ ಮಂಗಳೂರು ವಿಮಾನ ನಿಲ್ದಾಣಕ್ಕೂ ಅಳವಡಿಸಲು ಕೂಡಲೇ ಆದೇಶ ನೀಡುವುದಾಗಿಯೂ ಡಾ.ಸುಧಾಕರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News