ಫಿನ್ಲ್ಯಾಂಡ್ ಮುಂದಿನ ರಾಯಭಾರಿಯಾಗಿ ರವೀಶ್ ಕುಮಾರ್ ನೇಮಕ

Update: 2020-06-03 15:38 GMT

ಹೊಸದಿಲ್ಲಿ, ಜೂ.3: ಫಿನ್ಲ್ಯಾಂಡ್‌ಗೆ ಭಾರತದ ಮುಂದಿನ ರಾಯಭಾರಿಯಾಗಿ ವಿದೇಶ ವ್ಯವಹಾರ ಇಲಾಖೆಯ ಮಾಜಿ ವಕ್ತಾರ ರವೀಶ್ ಕುಮಾರ್‌ರನ್ನು ನೇಮಿಸಲಾಗಿದ್ದು, ಅವರು ಶೀಘ್ರವೇ ಅಧಿಕಾರ ವಹಿಸಲಿದ್ದಾರೆ ಎಂದು ಸರಕಾರ ಘೋಷಿಸಿದೆ.

ರವೀಶ್ ಕುಮಾರ್ ಈಗ ವಿದೇಶ ವ್ಯವಹಾರ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದೇಶ ವ್ಯವಹಾರ ಇಲಾಖೆಯ ವಕ್ತಾರರಾಗಿ ನೇಮಕಗೊಳ್ಳುವ ಮೊದಲು ಕುಮಾರ್ ಫ್ರಾಂಕ್‌ಫರ್ಟ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ರವೀಶ್ ಕುಮಾರ್ ಫಿನ್ಲ್ಯಾಂಡ್‌ನಲ್ಲಿ ಭಾರತದ ರಾಯಭಾರಿಯಾಗಿರುವ ವಾಣಿ ರಾವ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. 1995ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ರವೀಶ್ ಕುಮಾರ್ 2017ರ ಜುಲೈಯಿಂದ 2020ರ ಎಪ್ರಿಲ್‌ವರೆಗೆ ವಿದೇಶ ವ್ಯವಹಾರ ಇಲಾಖೆಯ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದು ಈ ಸಂದರ್ಭ ಬಾಲಕೋಟ್ ವಾಯುದಾಳಿ, ಜಮ್ಮು ಮತ್ತು ಕಾಶ್ಮೀರದ ಮರುಸಂಘಟನೆ, ಎನ್‌ಆರ್‌ಸಿ ವಿವಾದ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳಲ್ಲಿ ಭಾರತದ ನಿಲುವನ್ನು ಸೂಕ್ತರೀತಿಯಲ್ಲಿ ಸಮರ್ಥಿಸಿದ್ದರು.

ಭಾರತಕ್ಕೆ ಯುರೋಪ್‌ನಲ್ಲಿ ಫಿನ್ಲಾಂಡ್ ಪ್ರಮುಖ ರಾಷ್ಟ್ರವಾಗಿದ್ದು ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ವೃದ್ಧಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News