ಲಡಾಕ್‌ನಲ್ಲಿ ಭಾರತ-ಚೀನಾ ಬಿಕ್ಕಟ್ಟು: ದೇಶದ ಜನತೆಗೆ ಸ್ಪಷ್ಟ ಮಾಹಿತಿ ನೀಡಲು ರಾಹುಲ್ ಆಗ್ರಹ

Update: 2020-06-03 15:44 GMT

ಹೊಸದಿಲ್ಲಿ, ಜೂ.3: ಲಡಾಕ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಭಾರತ ಮತ್ತು ಚೀನಾದ ಸೇನೆಯ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಂತೆಯೇ, ಚೀನಾದ ಸೈನಿಕರು ಭಾರತದ ಪ್ರದೇಶದೊಳಗೆ ಪ್ರವೇಶಿಸಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಗಮನಾರ್ಹ ಸಂಖ್ಯೆಯಲ್ಲಿ ಚೀನಾದ ಸೈನಿಕರು ಈಶಾನ್ಯ ಲಡಾಕ್ ಭಾಗದಲ್ಲಿ ಭಾರತದ ಪ್ರದೇಶದೊಳಗೆ ಬಂದಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತವು ಎಲ್ಲಾ ಅಗತ್ಯದ ಕ್ರಮಗಳನ್ನು ಕೈಗೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿಕೆ ನೀಡಿದ್ದರು. ಇದನ್ನು ಉಲ್ಲೇಖಿಸಿ ಬುಧವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಚೀನಾದ ಯಾವುದೇ ಯೋಧ ಭಾರತದ ಪ್ರದೇಶಕ್ಕೆ ನುಗ್ಗಿಲ್ಲ ಎಂಬುದನ್ನು ಭಾರತ ಸರಕಾರ ದಯವಿಟ್ಟು ದೃಢಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೂರ್ವ ಲಡಾಕ್‌ನಲ್ಲಿ ಉಭಯ ಸೇನೆಗಳ ಮಧ್ಯೆ ತಲೆದೋರಿರುವ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಜೂನ್ 6ರಂದು ಭಾರತ ಮತ್ತು ಚೀನಾ ದೇಶಗಳು ಉನ್ನತ ಮಟ್ಟದ ಸಭೆ ನಡೆಸಲಿವೆ ಎಂಬ ವರದಿಯನ್ನೂ ತಮ್ಮ ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ. ಗಡಿ ಭಾಗದಲ್ಲಿ ಚೀನಾದೊಂದಿಗೆ ಉಂಟಾಗಿರುವ ಬಿಕ್ಕಟ್ಟಿನ ಕುರಿತ ಕೇಂದ್ರ ಸರಕಾರದ ಮೌನಧೋರಣೆಯು ಭಾರೀ ಊಹಾಪೋಹ ಮತ್ತು ಅನಿಶ್ಚಿತತೆಗೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಏನು ನಡೆಯುತ್ತಿದೆ ಎಂಬುದನ್ನು ದೇಶದ ಜನತೆಗೆ ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕು ಎಂದವರು ಒತ್ತಾಯಿಸಿದ್ದಾರೆ. ಭಾರತ- ಚೀನಾ ಗಡಿಭಾಗದಲ್ಲಿ ಈ ಹಿಂದಿನ ಸ್ಥಿತಿ ನೆಲೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶದ ಎಲ್ಲಾ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News