ವಾಶಿಂಗ್ಟನ್: ಕರ್ಫ್ಯೂ ವೇಳೆ ಪ್ರತಿಭಟನಕಾರರಿಗೆ ಮನೆಯೊಳಗೆ ಆಶ್ರಯ ನೀಡಿದ ರಾಹುಲ್ ದುಬೆ

Update: 2020-06-03 15:53 GMT
ಫೋಟೊ ಕೃಪೆ: twitter.com/Jeminiz65

ವಾಶಿಂಗ್ಟನ್,ಜೂ.3: ಪೊಲೀಸ್‌ ದೌರ್ಜನ್ಯಕ್ಕೆ ಜಾರ್ಜ್ ಫ್ಲಾಯ್ಡ್ ಬಲಿಯಾದ ಘಟನೆ ವಿರುದ್ಧ ವಾಶಿಂಗ್ಟನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ 70ಕ್ಕೂ ಅಧಿಕ ಮಂದಿಯನ್ನು ಬಂಧನದಿಂದ ಪಾರು ಮಾಡಲು ಅವರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿ, ರಕ್ಷಿಸಿದ ಭಾರತೀಯ ಮೂಲದ ವಾಶಿಂಗ್ಟನ್ ನಿವಾಸಿ ರಾಹುಲ್ ದುಬೆ ಸಾಮಾಜಿಕ ಜಾಲತಾಣದಲ್ಲಿ ‘ಹೀರೋ’ ಎನಿಸಿಕೊಂಡಿದ್ದಾರೆ.

ಮಿನ್ನಪೊಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್ ನನ್ನು ಪೊಲೀಸ್ ಒಬ್ಬಾತ ಉಸಿರುಗಟ್ಟಿಸಿ ಸಾಯಿಸಿದ ಘಟನೆ ವಿರುದ್ಧ ಸೋಮವಾರ ವಾಶಿಂಗ್ಟನ್‌ನ ಶ್ವೇತಭವನದ ಸಮೀಪ ಭಾರೀ ಪ್ರತಿಭಟನೆ ಭುಗಿಲೆದ್ದಿತ್ತು. ಆನಂತರ ನಗರಾದ್ಯಂತ ಕರ್ಫ್ಯೂ ಹೇರಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಕಾರರ ಗುಂಪೊಂದು ಸ್ವಾನ್‌ಸ್ಟ್ರೀಟ್ ಪ್ರದೇಶದಲ್ಲಿ ಕಾಲ್ನಡಿಗೆ ಜಾಥಾದಲ್ಲಿ ಸಾಗುತ್ತಿದ್ದಾಗ, ಅವರನ್ನು ಪೊಲೀಸರ ತಂಡವೊಂದು ಬೆನ್ನಟ್ಟಿಕೊಂಡು ಬಂದಿತ್ತು.ಈ ಸಂದರ್ಭದಲ್ಲಿ ಪೊಲೀಸರ ಎರಚಿದ ಪೆಪ್ಪರ್‌ ಸ್ಪ್ರೇಯಿಂದಾಗಿ ಕೆಲವು ಪ್ರತಿಭಟನಕಾರರ ಕಣ್ಣುರಿಯುತ್ತಿತ್ತು. ಆಗ ನೆರೆಹೊರೆಯ ಕೆಲವರು ಬೇಲಿಯಾಚೆಯಿಂದ ಹಾಲಿನ ಪೊಟ್ಟಣಗಳನ್ನು ನೀಡಿ,ಕಣ್ಣಿನ ಉರಿ ಕಡಿಮೆಗೊಳಿಸಲು ನೆರವಾದರು.

 ಇದೇ ವೇಳೆ ಸ್ಥಳೀಯ ನಿವಾಸಿಯಾದ ರಾಹುಲ್‌ ದುಬೆ, ಸಮಯಪ್ರಜ್ಞೆ ಮೆರೆದು ತನ್ನ ಮನೆಯನ್ನು ಸೇರಿಕೊಳ್ಳುವಂತೆ ಆತುರಾತುರವಾಗಿ ಕರೆದರು. 70ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ರಾಹುಲ್‌ದುಬೆಯವರ ಮನೆಯೊಳಗೆ ಪ್ರವೇಶಿಸುವ ತನಕವೂ ಪೊಲೀರು ಅವರನ್ನು ಬೆನ್ನಟ್ಟಿಕೊಂಡೇ ಬಂದಿದ್ದರು.

ಪ್ರತಿಭಟನಕಾರರಲ್ಲಿ ಓರ್ವ ತಾಯಿ ಹಾಗೂ ಆಕೆಯ ಪುತ್ರಿ ಕೂಡಾ ಇದ್ದುದರಿಂದ ಅವರಿಗೆ ತನ್ನ ಮಗನ ಕೋಣೆಯನ್ನು ಅವರಿಗೆ ಬಿಟ್ಟುಕೊಟ್ಟಿದ್ದಾಗಿ ದುಬೆ ಹೇಳುತ್ತಾರೆ.

ಪ್ರತಿಭಟನಕಾರರಿಗೆ ಆಶ್ರಯ ನೀಡಿದ ದುಬೆ ಅವರಿಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ. ಆದರೆ ತಾನು ವಿಶೇಷವಾದುದನ್ನು ಮಾಡಿದ್ದೇನೆಂದು ತಾನು ಭಾವಿಸುವುದಿಲ್ಲ. ನಾನಲ್ಲದಿದ್ದರೂ, ಹೆಚ್ಚಿನವರು , ಪ್ರತಿಭಟನಕಾರರಿಗಾಗಿ ಬಾಗಿಲು ತೆರೆದಿಡುತ್ತಿದ್ದರು ಎಂದು ಅವರು ಹೇಳಿದ್ದಾಗಿ ಸ್ಥಳೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ರಾಹುಲ್ ದುಬೆ ಕರ್ಫ್ಯೂ ಅವಧಿಯಲ್ಲಿ ರಾತ್ರಿಯಿಡೀ ಪ್ರತಿಭಟನಕಾರರಿಗೆ ಆಶ್ರಯ ನೀಡಿದ್ದರು. ಜಾರ್ಜ್ ಫ್ಲಾಯ್ಡ್ ಸಾವಿನ ಘಟನೆಯ ಬಳಿಕ ಅಮೆರಿಕದ ಅಸ್ಮಿತೆ ಈಗ ಕಳೆದುಹೋಗಿದೆ ಹಾಗೂ ದೇಶವು ಶಿಥಿಲಗೊಂಡಿದೆ ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಇಂತಹ ಜನರ ಅಗತ್ಯವಿದೆಯೆಂದು ನಾಗರಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಿದ್ದಾರೆ.

 ‘‘ ಒಂದು ವೇಳೆ ನನ್ನ ಕಣ್ಣ ಮುಂದೆ ನಡೆದಿದ್ದನ್ನು ನೀವು ಕೂಡಾ ಕಂಡಿದ್ದರೆ, ಆಗ ನನಗೆ ಅವರಿಗೆ ಮನೆಯಲ್ಲಿ ಆಶ್ರಯ ನೀಡದೆ ಬೇರೆ ಆಯ್ಕೆಯೇ ಇರಲಿಲ್ಲ. ಯಾಕೆಂದರೆ ಪ್ರತಿಭಟನಕಾರರು ರಸ್ತೆಯಲ್ಲಿದ್ದರೆ ಪೊಲೀಸರು ಅವರ ಮೇಲೆ ಪೊಲೀಸರು ಪೆಪ್ಪರ್ ಸ್ಪ್ರೇ ಎರಚುತ್ತಿದ್ದರು ಹಾಗೂ ಅವರನ್ನು ಥಳಿಸಿ, ನೆಲಕ್ಕೆ ಅಪ್ಪಳಿಸುತ್ತಿದ್ದರು”.

- ರಾಹುಲ್ ದುಬೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News