ಮುಂಬೈ: ತೀವ್ರತೆ ತಗ್ಗಿಸಿದ ನಿಸರ್ಗ ಚಂಡಮಾರುತ

Update: 2020-06-03 17:42 GMT

ಮುಂಬೈ, ಜೂ.3: ಕೊರೋನ ಸೋಂಕಿನ ಹಾವಳಿಯಿಂದ ಕಂಗೆಟ್ಟಿದ್ದ ಮುಂಬೈ ಮಹಾನಗರ ಎದುರಾಗಿದ್ದ ಮತ್ತೊಂದು ಆಘಾತದಿಂದ ಪಾರಾಗಿದೆ. ತೀವ್ರ ಆತಂಕಕ್ಕೆ ಕಾರಣವಾಗಿದ್ದ ನಿಸರ್ಗ ಚಂಡಮಾರುತ ಮಹಾರಾಷ್ಟ್ರದ ತೀರಕ್ಕೆ ಗಂಟೆಗೆ 120 ಕಿ.ಮೀ ವೇಗದಿಂದ ಅಪ್ಪಳಿಸಿದ್ದು ಬಳಿಕ ವೇಗ ಕಳೆದುಕೊಂಡ ಕಾರಣ ಮಳೆ ಮತ್ತು ಗಾಳಿಯ ಪ್ರಮಾಣ ಕಡಿಮೆಯಾಗಿದ್ದು ಹೆಚ್ಚಿನ ಅನಾಹುತವಾಗಿಲ್ಲ. ಆದರೆ ರಾಯ್‌ಗಢ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

85 ಬೃಹತ್ ಮರಗಳು ಉರುಳಿ ಬಿದ್ದಿದ್ದು ಕೆಲವು ಮರಗಳು ಮನೆಯ ಮೇಲೆಯೇ ಉರುಳಿವೆ. 11 ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್‌ಡಿಆರ್‌ಎಫ್)ದ 43 ತಂಡಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಲಾಗಿದ್ದು ಮರಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.

ನಿಸರ್ಗ ಚಂಡಮಾರುತ ಬುಧವಾರ ಮಧ್ಯಾಹ್ನದ ವೇಳೆ ರಾಯ್‌ಗಢ ಜಿಲ್ಲೆಯ ಆಲಿಬಾಗ್ ಎಂಬ ಗ್ರಾಮಕ್ಕೆ ಅಪ್ಪಳಿಸಿದಾಗ ತೀವ್ರಗೊಂಡಿತ್ತು. ಆದರೆ ಕ್ರಮೇಣ ತೀವ್ರತೆ ಕಳೆದುಕೊಂಡಿದೆ. ರಾಯ್‌ಗಢ ಜಿಲ್ಲೆಯಲ್ಲಿ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಪೂರೈಕೆಗೆ ತೊಡಕಾಗಿದೆ. ಅಲ್ಲದೆ ಮರ ಉರುಳಿ ಬಿದ್ದ ಕಾರಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಆಲಿಬಾಗ್‌ನ ಉಮ್ಟೆ ಎಂಬ ಗ್ರಾಮದಲ್ಲಿ ವಿದ್ಯುತ್ ಕಂಬ ಉರುಳಿಬಿದ್ದು 58 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಉಳಿದಂತೆ ಯಾವುದೇ ಪ್ರಾಣಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ ಎಂದು ರಾಯ್‌ಗಢ ಜಿಲ್ಲಾಧಿಕಾರಿ ನಿಧಿ ಚೌಧುರಿ ಹೇಳಿದ್ದಾರೆ.

ವಿಮಾನ ಮತ್ತು ರೈಲು ಸಂಚಾರಕ್ಕೂ ತೊಡಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸಜ್ಜಾಗಿರುವಂತೆ ಕೊರೋನ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 40,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಚಂಡಮಾರುತ ಅಪ್ಪಳಿಸುವ ಸಂದರ್ಭ ಜನತೆ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸುವಂತೆ ಮುಂಬಯಿ ನಗರಪಾಲಿಕೆ ತಿಳಿಸಿದೆ. ಮನೆಯ ಕಿಟಕಿಯ ಬಳಿ ನಿಲ್ಲಬಾರದು, ಅಡುಗೆ ಅನಿಲ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು, ಮೊಬೈಲ್ ಫೋನ್‌ಗಳನ್ನು ಮೊದಲೇ ಚಾರ್ಜ್ ಮಾಡಿಟ್ಟುಕೊಳ್ಳಬೇಕು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News