ದೇಶದಲ್ಲಿ ಆರು ಸಾವಿರದ ಗಡಿ ದಾಟಿದ ಕೋವಿಡ್ ಸಾವಿನ ಸಂಖ್ಯೆ

Update: 2020-06-04 03:45 GMT

ಹೊಸದಿಲ್ಲಿ : ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆಯ ಮೂರನೇ ದಿನ 8,723 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಮಾರಕ ಸೋಂಕಿಗೆ 254 ಮಂದಿ ಬುಧವಾರ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ವೈರಸ್ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 6 ಸಾವಿರದ ಗಡಿ ದಾಟಿದೆ.

ಸತತ ಆರನೇ ದಿನ ದೇಶದಲ್ಲಿ 200ಕ್ಕಿಂತ ಅಧಿಕ ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 6079ಕ್ಕೇರಿದೆ. ದೆಹಲಿ (1513), ತಮಿಳುನಾಡು (1268), ಗುಜರಾತ್ (485), ಆಂಧ್ರಪ್ರದೇಶ (180) ಮತ್ತಿತರ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ದಾಖಲೆ ಸಂಖ್ಯೆಯ (122) ಸಾವು ಸಂಭವಿಸಿದ್ದು, ದೇಶದಲ್ಲಿ ಮೃತಪಟ್ಟ ಒಟ್ಟು ಮಂದಿಯ ಪೈಕಿ ಶೇಕಡ 48ರಷ್ಟು ಮಂದಿ ಈ ರಾಜ್ಯದಲ್ಲೇ ಆಸು ನೀಗಿದ್ದಾರೆ. ಉಳಿದಂತೆ ದೆಹಲಿ (50), ಗುಜರಾತ್ (30), ತಮಿಳುನಾಡು (11) ಮತ್ತು ಬಂಗಾಳ (10)ದಲ್ಲಿ ಹೆಚ್ಚಿನ ಸಾವು ಸಂಭವಿಸಿದೆ.

ಮಹಾರಾಷ್ಟ್ರದಲ್ಲಿ 2587 ಹೊಸ ಪ್ರಕರಣಗಳು ವರದಿಯಾಗಿದ್ದರೂ, ಏರಿಕೆ ದರ ಮೇ 1ರಂದು 7.76% ಇದ್ದುದು ಇದೀಗ 4.15%ಗೆ ಇಳಿದಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 74,860ಕ್ಕೇರಿದೆ. ರಾಜ್ಯದಲ್ಲಿ ಸೋಂಕು ಪ್ರಕರಣಗಳ ಏರಿಕೆ ದರ ದೇಶದ ಸರಾಸರಿಯಾದ 4.74%ಗಿಂತಲೂ ಕಡಿಮೆ ಇದೆ ಎಂದು ಆರೋಗ್ಯ ಸಚಿವ ರಾಜೇಶ್ ತೋಪ್ ಹೇಳಿದ್ದಾರೆ. ಇದು ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವುದರ ಸೂಚಕ ಎಂದು ಅವರು ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,09,468 ಆಗಿದ್ದು, ಶೇಕಡ 49.6ರಷ್ಟು ಮಂದಿ ಅಂದರೆ 1,03,984 ಮಂದಿ ಚೇತರಿಸಿಕೊಂಡಿದ್ದಾರೆ. ಗುಜರಾತ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,117ಕ್ಕೇರಿದೆ. ಈ ಮಧ್ಯೆ ರಾಜ್ಯದಲ್ಲಿ ಚೇತರಿಸಿಕೊಂಡವರ ಪ್ರಮಾಣ ಚೆನ್ನೈ, ದೆಹಲಿ ಮತ್ತು ಮುಂಬೈಯನ್ನು ಮೀರಿದ್ದು, ಶೇಕಡ 71ರಷ್ಟು ಮಂದಿ ಗುಣಮುಖರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News