​ವಲಸೆ ಕಾರ್ಮಿಕರಿಗೆ ವಿಮಾನಯಾನದ ಭಾಗ್ಯ!

Update: 2020-06-04 04:12 GMT

ಹೈದರಾಬಾದ್: ನಗರದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹೀಗೆ ತಮ್ಮ ತವರು ರಾಜ್ಯಗಳಿಗೆ ದಯನೀಯ ಸ್ಥಿತಿಯಲ್ಲಿ ತೆರಳಿದ್ದ ವಲಸೆ ಕಾರ್ಮಿಕರಿಗೆ ಇದೀಗ ವಿಮಾನದಲ್ಲಿ ಕೆಲಸಕ್ಕೆ ಮರಳುವ ಯೋಗ ಕೂಡಿಬಂದಿದೆ.

ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾದ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಕೂಲಿಕಾರ್ಮಿಕರ ಕೊರತೆಯ ಹಿನ್ನೆಲೆಯಲ್ಲಿ, ಊರು ಸೇರಿರುವ ವಲಸೆ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಕರೆತರುವ ಸಲುವಾಗಿ ಬಿಲ್ಡರ್‌ಗಳು ಕಾರ್ಮಿಕರಿಗೆ ವಿಮಾನ ಟಿಕೆಟ್ ಅಥವಾ ಹವಾನಿಯಂತ್ರಿತ ರೈಲು ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಪ್ರತಿ ಕಾರ್ಮಿಕರನ್ನು ಕರೆತರಲು ಸರಾಸರಿ 4000 ದಿಂದ 5000 ರೂಪಾಯಿವರೆಗೆ ವೆಚ್ಚ ಮಾಡುತ್ತಿದ್ದಾರೆ.

ಬಡಗಿಗಳು, ಪೈಂಟರ್‌ಗಳು, ಗ್ರಾನೈಟ್ ಕೆಲಸಗಾರರು ಮತ್ತು ಸ್ಕಫೋಲ್ಡಿಂಗ್ ಕೌಶಲ ಹೊಂದಿದ ಕಾರ್ಮಿಕರನ್ನು ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಕರೆ ತರಲಾಗುತ್ತಿದೆ. ನಗರದ ಕಾರ್ಮಿಕ ಬಲದ ಶೇಕಡ 40ರಿಂದ 50ರಷ್ಟು ಮಂದಿ ಇಂಥ ಕಾರ್ಮಿಕರು ಇದ್ದಾರೆ. ಉಳಿದಂತೆ ಉತ್ತರ ಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಬಂದ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ.

ಇದು ಸಂಕಷ್ಟದ ಕಾಲಘಟ್ಟ; ಕಾರ್ಮಿಕರನ್ನು ನಗರಕ್ಕೆ ಕರೆತರಲು ನಾವು ದೊಡ್ಡ ಮೊತ್ತವನ್ನು ವೆಚ್ಚ ಮಾಡಲೇಬೇಕಾಗಿದೆ. 5000ಕ್ಕಿಂತ ಕಡಿಮೆ ವಿಮಾನ ಟಿಕೆಟ್ ದರ ಇರುವ ಕಡೆಗಳಿಂದ ವಲಸೆ ಕಾರ್ಮಿಕರಿಗೆ ಟಿಕೆಟ್ ಕಾಯ್ದಿರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ ಎಂದು ಹೈದರಾಬಾದ್‌ನ ಪ್ರಿಸ್ಟೇಜ್ ಗ್ರೂಪ್ ಹಿರಿಯ ಉಪಾಧ್ಯಕ್ಷ ಆರ್.ಸುರೇಶ್ ಕುಮಾರ್ ವಿವರಿಸಿದ್ದಾರೆ.

ಬೆಂಗಳೂರು ಮೂಲದ ಈ ಕಂಪನಿಗಾಗಿ ಪಾಟ್ನಾದಿಂದ 10 ಮಂದಿ ಬಡಗಿಗಳು ಇಲ್ಲಿನ ರಾಜೀವ್‌ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೂ ಒಂದಷ್ಟು ಮಂದಿಯ ತಂಡ ಆಗಮಿಸಲಿದೆ ಎಂದು ಅವರು ಹೇಳುತ್ತಾರೆ. ಕನಿಷ್ಠ 3000 ಕಾರ್ಮಿಕರು ಇರಬೇಕಾದಲ್ಲಿ 700ರಷ್ಟು ಮಾತ್ರ ಕಾರ್ಮಿಕರು ಸಿಗುತ್ತಿದ್ದಾರೆ ಎನ್ನುವುದು ಅವರ ಅಳಲು. ಸದ್ಯಕ್ಕೆ ಪಾಟ್ನಾದಿಂದ ಹೈದರಾಬಾದ್‌ಗೆ ವಿಮಾನಯಾನ ದರ 4900 ರೂಪಾಯಿ ಇದೆ.

ಕೆಲ ನಿರ್ಮಾಣ ಸಂಸ್ಥೆಗಳು ವಿಮಾನದಲ್ಲಿ ಕಾರ್ಮಿಕರನ್ನು ಕರೆತರಲು ಮುಂದಾಗಿವೆ. ಪ್ರಮುಖವಾಗಿ ಬಿಹಾರ ಹಾಗೂ ಬಂಗಾಳದಿಂದ ಕರೆ ತರುತ್ತಿವೆ ಎಂದು ಗುತ್ತಿಗೆದಾರರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News