ಕೇರಳ ಆನೆ ಸಾವು ಪ್ರಕರಣ ಮಲಪ್ಪುರಂನಲ್ಲಿ ನಡೆದದ್ದು ಎಂದು ಸುಳ್ಳು ಹೇಳಿದ ಮೇನಕಾ ಗಾಂಧಿ

Update: 2020-06-04 09:16 GMT

ಹೊಸದಿಲ್ಲಿ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸ್ಫೋಟಕಗಳಿಂದಾಗಿ ಗರ್ಭಿಣಿ ಆನೆಯೊಂದು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ನೀಡಿರುವ ಹೇಳಿಕೆ ಭಾರೀ ಆಕ್ರೋಶ ಸೃಷ್ಟಿಸಿದೆ.

ಸುದ್ದಿ ಸಂಸ್ಥೆ ಎಎನ್‍ಐ ಜತೆ ಮಾತನಾಡಿದ್ದ ಮೇನಕಾ ಘಟನೆ ಕುರಿತು ಪ್ರತಿಕ್ರಿಯಿಸಿ, ಮಲಪ್ಪುರಂ ಕ್ರಿಮಿನಲ್ ಚಟುವಟಿಕೆಗಳಿಗೆ ಕುಖ್ಯಾತವಾಗಿದೆ ಎಂದಿದ್ದರು. ನಂತರ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಅವರು ಹೀಗೆ ಬರೆದಿದ್ದರು. “ಮಲಪ್ಪುರಂ ತನ್ನ ಬಹಳಷ್ಟು ಗಂಭೀರ ಕ್ರಿಮಿನಲ್ ಚಟುವಟಿಕೆಗಳಿಗೆ, ಮುಖ್ಯವಾಗಿ ಪ್ರಾಣಿಗಳಿಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳಿಗೆ  ಹೆಸರು ಪಡೆದಿದೆ. ಪ್ರಾಣಿ ಹತ್ಯೆ ಮಾಡುವ ಒಬ್ಬನೇ ಒಬ್ಬ ವ್ಯಕ್ತಿಯ ವಿರುದ್ಧ ಯಾವತ್ತೂ ಕ್ರಮ ಕೈಗೊಳ್ಳಲಾಗಿಲ್ಲ, ಹಾಗೂ ಅವರು ಅಂತಹ ಅಪರಾಧ ಮಾಡುತ್ತಲೇ ಇರುತ್ತಾರೆ. ನೀವು ಕರೆ ಮಾಡಿ/ಇಮೇಲ್  ಮಾಡಿ ಕ್ರಮಕ್ಕೆ ಆಗ್ರಹಿಸಬೇಕೆಂದು ನಾನು ಸಲಹೆ ನೀಡುತ್ತೇನೆ” ಎಂದಿದ್ದರು.

ಕೇರಳದ ತ್ರಿಶ್ಶೂರಿನ ಕೂಡಲಮಾಣಿಕ್ಯಂ ದೇವಾಲಯದಲ್ಲಿ ಆನೆಮರಿಗೆ ಹಿಂಸೆ ನೀಡಲಾಗುತ್ತಿರುವುದಿಂದ ಅದು ಬೇಗನೇ ಸಾಯಬಹುದು ಎಂದೂ ಅವರು ಆರೋಪಿಸಿದ್ದರು.

ಆದರೆ ಘಟನೆ ನಡೆದದ್ದು ಮಲಪ್ಪುರಂನಲ್ಲಿ ಅಲ್ಲ, ಬದಲಾಗಿ ಪಾಲಕ್ಕಾಡ್ ನಲ್ಲಿ ಎನ್ನುವುದು ದೃಢಪಟ್ಟಿದೆ. ಮಲಪ್ಪುರಂನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೇನಕಾ ಗಾಂಧಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದಿದ್ದು ಪಾಲಕ್ಕಾಡ್‍ನಲ್ಲಿ, ಮಲಪ್ಪುರಂನಲ್ಲಿ ಅಲ್ಲ

ಅರಣ್ಯ ಅಧಿಕಾರಿಗಳ ಪ್ರಕಾರ ಕಾಡಾನೆಯು ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿ ಅರಣ್ಯವನ್ನು ತೊರೆದು ಹತ್ತಿರದ ಗ್ರಾಮಕ್ಕೆ ಆಹಾರ ಅರಸಿ ಹೋದಾಗ ಅಲ್ಲಿ ಸ್ಫೋಟಕ ತುಂಬಿದ್ದ ಅನಾನಸು ಹಣ್ಣು ತಿಂದಿತ್ತು. ಸ್ಫೋಟದಿಂದಾಗಿ ಆನೆಗೆ ಬಹಳಷ್ಟು ನೋವಾಗಿ ನಡೆಯಲು ಹಾಗೂ ತಿನ್ನಲು ಸಾಧ್ಯವಾಗದೆ ಕೊನೆಗೆ ನದಿಯಲ್ಲಿ ನಿಂತಿರುವಾಗಲೇ ಅದು ಸತ್ತಿದೆ.

ಈ ನಡುವೆ ಬಿಜೆಪಿ ಬೆಂಬಲಿಗರ ನೂರಾರು ಟ್ವಿಟರ್ ಹ್ಯಾಂಡಲ್‍ಗಳು ಮೇನಕಾರ ಟ್ವೀಟ್ ಬಳಸಿ ದ್ವೇಷ ಹರಡಲು ಆರಂಭಿಸಿದೆ. ಸುದ್ದಿ ಸಂಸ್ಥೆ ಎಎನ್‍ಐ, ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ಝೀ ನ್ಯೂಸ್, ಇಂಡಿಯಾ ಟಿವಿ, ನ್ಯೂಸ್ 18, ಹಿಂದುಸ್ತಾನ್ ಟೈಮ್ಸ್, ಫಸ್ಟ್ ಪೋಸ್ಟ್ ಸಹಿತ ಹಲವು ಆಂಗ್ಲ ಮತ್ತು ಹಿಂದಿ ಮಾಧ್ಯಮಗಳು ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿತ್ತು ಎಂದು ತಪ್ಪಾಗಿ ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News