ಗುಜರಾತ್: ರಾಜ್ಯಸಭಾ ಚುನಾವಣೆಗೆ ಮೊದಲೇ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ

Update: 2020-06-04 10:47 GMT

ಅಹ್ಮದಾಬಾದ್,ಜೂ.4: ಜೂನ್ 19ರಂದು ರಾಜ್ಯಸಭಾ ಚುನಾವಣೆ ನಡೆಯುವ ಮೊದಲೇ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದ್ದು, ಆ ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಮೂರನೇ ಶಾಸಕ ರಾಜೀನಾಮೆಯ ಹಾದಿಯಲ್ಲಿದ್ದಾರೆ.

ಈ ಬಾರಿಯೂ ಕೂಡ ಗುಜರಾತ್‌ನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಇರುವ ಕಾರಣ ಈ ರೀತಿಯ ಬೆಳವಣಿಗೆಯಾಗಿದೆ.

 ಕರ್ಜನ್ ಕ್ಷೇತ್ರದ ಶಾಸಕ ಅಕ್ಷಯ್ ಪಟೇಲ್ ರಾಜೀನಾಮೆ ನೀಡಿದ್ದು, ಕಪ್ರಡಾ ಕ್ಷೇತ್ರದ ಶಾಸಕ ಜೀತು ಚೌಧರಿ ಪಕ್ಷದ ಸಂಪರ್ಕಕ್ಕೆ ಸಿಗುತ್ತಿಲ್ಲ. ಚೌಧರಿ ಕೂಡ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ನಂಬಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದು ಖಚಿತವಲ್ಲದ ಮೂಲಗಳ ಪ್ರಕಾರ ಮೂರನೇ ಶಾಸಕ ಕೂಡ ರಾಜೀನಾಮೆ ನೀಡಿದ್ದಾರೆ.

"ಇಬ್ಬರ ರಾಜೀನಾಮೆಯನ್ನು ನಾನು ಖಚಿತಪಡಿಸುವೆ. ಮೂರನೇ ಶಾಸಕನ ರಾಜೀನಾಮೆ ಖಚಿತಪಡಿಸಲು ಯತ್ನಿಸುತ್ತೇವೆ. ಇದು ನಿರೀಕ್ಷಿತ. ಏಕೆಂದರೆ ಇದು ಗುಜರಾತ್. ಅವರು(ಬಿಜೆಪಿ)ಇತರ ರಾಜ್ಯಗಳಲ್ಲಿ ಈ ರೀತಿ ಮಾಡಬಹುದಾದರೆ ಗುಜರಾತ್ ಅವರ ತವರು ನೆಲ'' ಎಂದು ಎಐಸಿಸಿ ಮುಖಂಡರೊಬ್ಬರು ಹೇಳಿದ್ದಾರೆ.

"ಭಾರತವು ಸ್ವತಂತ್ರ ಭಾರತದಲ್ಲಿ ಅತಿ ದೊಡ್ಡ ಆರೋಗ್ಯ, ಆರ್ಥಿಕ ಹಾಗೂ ಮಾನವೀಯ ಬಿಕ್ಕಟ್ಟುಗಳ ನಡುವೆ ಇದೆ. ಬಿಜೆಪಿ ರಾಜ್ಯಸಭಾ ಚುನಾವಣೆಗಾಗಿ ತನ್ನಲ್ಲಾ ಶಕ್ತಿಯನ್ನು ಬಳಸಿ ಶಾಸಕರನ್ನು ಬೇಟೆಯಾಡುವುದನ್ನು ಬಿಟ್ಟು ಬೇರೆನೂ ಯೋಚಿಸಲು ಸಾಧ್ಯವಿಲ್ಲ. ಇದರಿಂದ ಜನರಿಗೆ ನಷ್ಟ'' ಎಂದು ಎಐಸಿಸಿ ಉಸ್ತುವಾರಿ ರಾಜೀವ್ ಸಟಾವ್ ಟ್ವೀಟ್ ಮಾಡಿದ್ದಾರೆ.

 ಮಾರ್ಚ್‌ನಲ್ಲಿ ಐವರು ಶಾಸಕರು ರಾಜೀನಾಮೆ ನೀಡಿದಾಗ ಕಾಂಗ್ರೆಸ್ ರಾಜ್ಯದಲ್ಲಿ ಹಿನ್ನೆಡೆ ಕಂಡಿತ್ತು. ಬಿಜೆಪಿಯು ವಿಧಾನಸಭೆಯಲ್ಲಿ 103 ಸದಸ್ಯರನ್ನು ಹೊಂದಿದ್ದು,ಎರಡು ರಾಜ್ಯಸಭೆ ಸೀಟು ಗೆಲ್ಲಬಹುದು. ಮಾರ್ಚ್‌ನಲ್ಲಿ ಐವರು ಶಾಸಕರು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ 68 ಶಾಸಕರಿದ್ದರು. ಈಗಿನ ಬೆಳವಣಿಗೆಯಿಂದ ಕಾಂಗ್ರೆಸ್ 2ನೇ ರಾಜ್ಯಸಭೆ ಸೀಟು ಗೆಲ್ಲುವುದು ಕಷ್ಟಕರವಾಗಿದೆ. ಬಿಜೆಪಿ ರಾಜ್ಯಸಭೆಗೆ ತನ್ನ ಮೂರನೆ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಮಾಜಿ ನಾಯಕ ನರಹರಿ ಅಮೀನ್‌ರನ್ನು ಕಣಕ್ಕಿಳಿಸಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News