ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮೇ ತಿಂಗಳಲ್ಲಿ 14.4 ಕೋಟಿ ಜನರಿಗೆ ಸಿಕ್ಕಿಲ್ಲ ಧಾನ್ಯ

Update: 2020-06-04 09:44 GMT

ಹೊಸದಿಲ್ಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಉಚಿತ ಧಾನ್ಯ (ಗೋಧಿ ಅಥವಾ ಅಕ್ಕಿ) ಪಡೆಯಲು ಅರ್ಹರಾಗಿರುವ 14.45 ಕೋಟಿ ಜನರು ಮೇ ತಿಂಗಳಲ್ಲಿ ತಮ್ಮ ಪಾಲಿನ ಧಾನ್ಯ ಪಡೆದಿಲ್ಲ ಎಂದು ಕೇಂದ್ರ ಸರಕಾರ ಜೂನ್ 3ರಂದು ಬಿಡುಗಡೆಗೊಳಿಸಿದ ಅಂಕಿಅಂಶಗಳು ತಿಳಿಸುತ್ತವೆ. ಎಪ್ರಿಲ್ ತಿಂಗಳಿನಲ್ಲಿ ಕೂಡ 6.44 ಕೋಟಿ ರೇಷನ್ ಕಾರ್ಡುದಾರರಿಗೆ ಈ ಯೋಜನೆಯಡಿ ಧಾನ್ಯಗಳು ದೊರಕಿಲ್ಲ ಎಂದು ಕೇಂದ್ರದ ಮಾಹಿತಿ ತಿಳಿಸುತ್ತದೆ ಎಂದು thewire.in ವರದಿ ಮಾಡಿದೆ.

ಈ ಯೋಜನೆಯಡಿ ಹೆಚ್ಚುವರಿ 5 ಕೆಜಿ ಧಾನ್ಯ ಎಪ್ರಿಲ್ ತಿಂಗಳಿನಲ್ಲಿ 73.86 ಕೋಟಿ ಫಲಾನುಭವಿಗಳನ್ನು ತಲುಪಿದ್ದರೆ, 6.44 ಕೋಟಿ ಮಂದಿಯನ್ನು ತಲುಪಿಲ್ಲ. ಅದೇ ಸಮಯ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ವಯ ನಿಯಮಿತವಾಗಿ ದೊರೆಯುವ 5 ಕೆಜಿ ಧಾನ್ಯ ಶೇ.95ರಷ್ಟು ಫಲಾನುಭವಿಗಳನ್ನು ತಲುಪಿದೆ.

ಮೇ ತಿಂಗಳಲ್ಲಿ ಹೆಚ್ಚುವರಿ ಧಾನ್ಯ 65.86 ಕೋಟಿ ಫಲಾನುಭವಿಗಳನ್ನು ತಲುಪಿದ್ದರೆ, 14.45 ಕೋಟಿ ಫಲಾನುಭವಿಗಳನ್ನು ತಲುಪಿಲ್ಲ. ಆದರೆ ಮೇ ತಿಂಗಳಲ್ಲಿ ಸಾಮಾನ್ಯವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ವಯ ನೀಡಲಾಗುವ ಆಹಾರ ಧಾನ್ಯ ಶೇ. 86ರಷ್ಟು ಫಲಾನುಭವಿಗಳನ್ನು ತಲುಪಿದೆ.

ಲೆಕ್ಕಾಚಾರದಂತೆ ಒಟ್ಟು 80.3 ಕೋಟಿ ಫಲಾನುಭವಿಗಳಿಗೆ 5 ಕೆಜಿ ಹೆಚ್ಚುವರಿ ಧಾನ್ಯ ತಲುಪಿದ್ದರೆ, ಒಟ್ಟು 40.15 ಲಕ್ಷ ಟನ್ ಧಾನ್ಯ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿತರಣೆಯಾಗಬೇಕಿತ್ತು. ಆದರೆ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾದ 36.93 ಮೆಟ್ರಿಕ್ ಟನ್ ಧಾನ್ಯದಲ್ಲಿ 30.16  ಲಕ್ಷ ಮೆಟ್ರಿಕ್ ಟನ್ ಎಪ್ರಿಲ್ ತಿಂಗಳಿನಲ್ಲಿಯೇ ವಿತರಣೆಯಾಗಿದ್ದರೆ, ಉಳಿದ ಧಾನ್ಯ ಮೇ ತಿಂಗಳಲ್ಲಿ ವಿತರಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News