ಪ್ರೋತ್ಸಾಹದ ನಿರೀಕ್ಷೆಯಲ್ಲಿ ವಿದ್ಯಾರ್ಥಿ ಚಿತ್ರ ಕಲಾವಿದ

Update: 2020-06-04 18:46 GMT
ಮುಹಮ್ಮದ್ ಹಾಶಿಂ

ಮಂಗಳೂರು, ಜೂ.4: ಪ್ರಕೃತಿಯ ರಮಣೀಯ ದೃಶ್ಯಗಳು, ಕಾರು, ಬಸ್, ಬೈಕ್ ಸಹಿತ ಥರಾವರಿ ವಾಹನಗಳು, ಪ್ರಾಣಿ-ಪಕ್ಷಿಗಳು, ಹಾಲುಗಲ್ಲದ ಪುಟಾಣಿಗಳ ಸಹಿತ ಮಹಾತ್ಮಾ ಗಾಂಧಿ, ಸರ್ ಎಂ. ವಿಶ್ವೇಶ್ವರಯ್ಯ, ಎಪಿಜೆ ಅಬ್ದುಲ್ ಕಲಾಂ ಹೀಗೆ ಗಣ್ಯರ ಚಿತ್ರಗಳು... ಹೀಗೆ ನೂರಾರು ಸುಂದರ ಚಿತ್ರಗಳು ಕಳೆದ ನಾಲ್ಕೈದು ವರ್ಷದಿಂದ ಈ ಹುಡುಗನ ಕೈ ಬೆರಳಿನಲ್ಲಿ ಅರಳಿವೆ. ಈಗಲೂ ಅರಳುತ್ತಿವೆ. ಹಾಗೇ ಅರಳಿದ್ದನ್ನು ಸಂಗ್ರಹಿಸಿಡಬೇಕು ಎಂಬ ಪ್ರಜ್ಞೆಯೇ ಈ ಹುಡುಗನಲ್ಲಿಲ್ಲ. ಅವರಿವರು ಬಂದು ‘ಇದು ಚಂದವಿದೆ... ನನಗೆ ಬೇಕಿತ್ತು’ ಎಂದರೆ ಸಾಕು... ‘ಹ್ಞುಂ’ ಎನ್ನುವ ಹುಡುಗನಿಗೆ ಹಾಗೇ ಕೊಂಡು ಹೋದವರು ಅವುಗಳನ್ನು ಜೋಪಾಣವಾಗಿಟ್ಟಿದ್ದಾರೋ... ಇಲ್ಲವೋ ಎಂದು ಕೂಡ ಗೊತ್ತಿಲ್ಲ.

ಪೆನ್ಸಿಲ್ ಮತ್ತು ಪೇಂಟಿಂಗ್ ಮೂಲಕ ಥರಾವರಿ ಚಿತ್ರ ಬಿಡಿಸುವ ಈ ಹುಡುಗನ ಹೆಸರು ಮುಹಮ್ಮದ್ ಹಾಶಿಂ. ಪಾವೂರು ಗ್ರಾಮದ ಮಲಾರ್ ಅರಸ್ತಾನದ ಕೆರೆಬಳಿ ನಿವಾಸಿಯಾಗಿರುವ ಕಬೀರ್-ರುಖಿಯಾ ದಂಪತಿಯ ಪುತ್ರನಾಗಿರುವ ಈತ ಮುಡಿಪು ಸರಕಾರಿ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ. 17ರ ಹರೆಯದ ಹಾಶಿಂ ಬಿಡಿಸಿದ ಚಿತ್ರಗಳು ಒಂದು ಕ್ಷಣ ನಿಬ್ಬೆರೆಗಾಗಿಸುತ್ತಿದೆ. ಯಾಕೆಂದರೆ ಪೆನ್ಸಿಲ್ ಅಥವಾ ಪೇಂಟಿಂಗ್ ಮೂಲಕ ಅರಳುವ ಎಲ್ಲಾ ಚಿತ್ರಗಳು ಒಂದನ್ನೊಂದು ಮೀರಿಸುತ್ತಿವೆ. ಮದುವೆ ಮನೆಗಳ ಶೃಂಗಾರವಲ್ಲದೆ ಗೋಡೆಗಳ ಮೇಲೆ ಬಿಡಿಸುವ ಹವ್ಯಾಸವೂ ಈತನಿಗಿದೆ.

ಅಂದಹಾಗೆ ಹಾಶಿಂನ ಕುಟುಂಬದಲ್ಲಿ ಯಾರೂ ಚಿತ್ರ ಕಲಾವಿದರಿಲ್ಲ. ತಂದೆ ಕಬೀರ್ ವೃತ್ತಿಯಲ್ಲಿ ರಿಕ್ಷಾ ಚಾಲಕ, ಪ್ರವೃತ್ತಿಯಲ್ಲಿ ಸಮಾಜ ಸೇವಕ. ತಾಯಿ ಗೃಹಿಣಿ. ವಿದ್ಯಾಭ್ಯಾಸವಿಲ್ಲದಿದ್ದರೂ ಮಗ ಕಲಿಕೆಯೊಂದಿಗೆ ಅದೇನೋ ಚಿತ್ರ ಬಿಡಿಸುತ್ತಾನೆ ಎಂಬ ಹೆಮ್ಮೆ. ಹಾಗಾಗಿ ಮಗನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

‘ನನಗೆ ಈ ಚಿತ್ರಕಲೆ ಹೇಗೆ ಸಿದ್ಧಿಸಿತು ಅಂತ ಗೊತ್ತಾಗುತ್ತಿಲ್ಲ. ನಮ್ಮದು ಚಿತ್ರ ಕಲಾವಿದರ ಕುಟುಂಬವಲ್ಲ. ಏಳನೆ ತರಗತಿಯಲ್ಲಿರುವಾಗ ಚಿತ್ರ ಬಿಡಿಸತೊಡಗಿದೆ. ಮನೆಯಲ್ಲೂ, ಶಾಲೆಯಲ್ಲೂ ಮೆಚ್ಚುಗೆ ಸಿಗತೊಡಗಿತು. ಗೆಳೆಯರೂ ಹುರಿದುಂಬಿಸಿದರು. ಆ ಬಳಿಕ ಸಮಯ ಸಿಕ್ಕಾಗಲೆಲ್ಲಾ ಚಿತ್ರ ಬಿಡಿಸುತ್ತಿರುವೆ. ಇನ್ನಷ್ಟು ಪ್ರೋತ್ಸಾಹ ಸಿಕ್ಕರೆ ಇದೇ ಕ್ಷೇತ್ರದಲ್ಲಿ ಏನಾದರೊಂದು ಸಾಧಿಸಬೇಕು ಎಂಬ ಗುರಿ ಇದೆ’ ಎಂದು ಹಾಶಿಂ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News