ಫೇಸ್‌ಬುಕ್ ದ್ವೇಷಭಾಷಣಕ್ಕೆ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಬೆದರಿಕೆ ಮಾನದಂಡ!

Update: 2020-06-05 04:05 GMT

ಹೊಸದಿಲ್ಲಿ, ಜೂ.5: ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, ವರ್ಷಾರಂಭದಲ್ಲಿ ಮಾಡಿದ ವಿವಾದಾತ್ಮಕ ಭಾಷಣದಲ್ಲಿ ಸಿಎಎ ವಿರೋಧಿ ಹೋರಾಟಗಾರರಿಗೆ ಬೆದರಿಕೆ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ವಿಷಯಗಳನ್ನು ಅಳೆಯಲು ಮಾನದಂಡವಾಗಿ ಪರಿಣಮಿಸಿದೆ.

ಫೇಸ್‌ಬುಕ್ ಸಿಇಓ ಮಾರ್ಕ್ ಝುಕರ್‌ಬರ್ಗ್ ಅವರು ಉದ್ಯೋಗಿಗಳ ಜತೆ ನಡೆಸಿದ ವೀಡಿಯೊ ಸಂವಾದದಲ್ಲಿ, ಮಿಶ್ರಾ ಬಿಜೆಪಿ ಮುಖಂಡನ ಹೆಸರು ಉಲ್ಲೇಖಿಸಿದೇ ಈ ದ್ವೇಷಭಾಷಣದ ಉದಾಹರಣೆ ನೀಡಿ, ಸಮಾಜ ಮಾಧ್ಯಮದಲ್ಲಿ ಕುಮ್ಮಕ್ಕು ನೀಡುವುದನ್ನು ತಡೆಯಲು ಸ್ಪಷ್ಟ ಚೌಕಟ್ಟು ನಿರ್ಮಿಸುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ.

ಭಾರತದಲ್ಲಿ ಇಂಥ ಪ್ರಕರಣಗಳು ಪತ್ತೆಯಾಗಿದ್ದು, ಪೊಲೀಸರು ಈ ಬಗ್ಗೆ ಎಚ್ಚರ ವಹಿಸದಿದ್ದರೂ, ನಮ್ಮ ಬೆಂಬಲಿಗರು ಇದನ್ನು ಪತ್ತೆ ಮಾಡಿ ಹಾದಿ ಸುಗಮಗೊಳಿಸಿದ್ದಾರೆ ಎಂದು ಝುಕರ್‌ಬರ್ಗ್ ಹೇಳಿದ್ದಾರೆ.

40ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಈಶಾನ್ಯ ದಿಲ್ಲಿ ಹಿಂಸಾಚಾರಕ್ಕೆ ಪ್ರಾಥಮಿಕ ಕಾರಣ ಎನ್ನಲಾದ ಮಿಶ್ರಾ ಭಾಷಣವನ್ನು ಝುಕರ್‌ಬರ್ಗ್ ಉಲ್ಲೇಖಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ಅವಧಿಯಲ್ಲಿ (ಫೆಬ್ರವರಿ 24-25) ಈಶಾನ್ಯ ದಿಲ್ಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಿಶ್ರಾ ಮಾತನಾಡಿದ್ದರು. ಆಗ ಜಾಫರಾಬಾದ್ ಮೆಟ್ರೋ ನಿಲ್ದಾಣ ಬಳಿಕ ಸಿಎಎ ವಿರುದ್ಧದ ರ್ಯಾಲಿ ನಡೆದಿತ್ತು.

ಸಿಎಎ ವಿರೋಧಿ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದ ರಸ್ತೆಗಳನ್ನು ಮೂರು ದಿನಗಳಲ್ಲಿ ತೆರವುಗೊಳಿಸುವಂತೆ ದಿಲ್ಲಿ ಪೊಲೀಸರಿಗೆ ಗಡುವು ನೀಡಲಾಗಿತ್ತು.

''ಅಮೆರಿಕ ಅಧ್ಯಕ್ಷರು ಭಾರತದಲ್ಲಿರುವವರೆಗೂ ನಾವು ಶಾಂತಿ ಕಾಪಾಡುತ್ತೇವೆ. ಆ ಬಳಿಕ ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರ ಮಾತನ್ನೂ ಕೇಳುವುದಿಲ್ಲ. ನಾವು ಬೀದಿಗೆ ಇಳಿಯುವುದು ಅನಿವಾರ್ಯವಾಗುತ್ತದೆ'' ಎಂದು ಮಿಶ್ರಾ ಹೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News