ಸಂಕಷ್ಟದಲ್ಲಿದ್ದ ಕೇರಳದ ವಿದ್ಯಾರ್ಥಿನಿಯರಿಗೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟ ಬದ್ರುದ್ದೀನ್

Update: 2020-06-05 06:26 GMT

ಬಂಟ್ವಾಳ, ಜೂ.‌5: ಕೋವಿಡ್ -&19 (ಕೊರೋನ) ವೈರಸ್ ಹರಡುವುದನ್ನು ನಿಯಂತ್ರಿಸಲು ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭ ಮಂಗಳೂರಿನಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಕೇರಳದ ಮೂವರು ವಿದ್ಯಾರ್ಥಿನಿಯರ ವಾಸಕ್ಕೆ ತನ್ನ ಮನೆಯನ್ನೇ ಬಿಟ್ಟುಕೊಟ್ಟ ಬದ್ರುದ್ದೀನ್ ಎಂಬವರ ಅಪರೂಪದ ಮಾನವೀಯ ಸೇವೆ ತಡವಾಗಿ ಬೆಳಕಿಗೆ ಬಂದಿದೆ.

ಕೇರಳದ ಆದಿರಾ, ನಿಲೋಫರ್, ಸೋನಿಯಾ ಎಂಬವರೇ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಮೂವರು ವಿದ್ಯಾರ್ಥಿನಿಯರು. ಇವರಿಗೆ ತನ್ನ ಮನೆಯನ್ನೇ ಬಿಟ್ಟುಕೊಟ್ಟವರು ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿ ಬದ್ರುದ್ದೀನ್.

ಕೇರಳದ ತ್ರಿಶೂರ್, ಪಾಲಕ್ಕಾಡ್, ಕೋಝಿಕ್ಕೋಡ್ ಜಿಲ್ಲೆಯ ನಿವಾಸಿಗಳಾದ ಈ ವಿದ್ಯಾರ್ಥಿನಿಯರು ಮಂಗಳೂರಿನ ಬಲ್ಲಾಳ್ ಬಾಗ್ ನ ಖಾಸಗಿ ಕಾಲೇಜೊಂದರಲ್ಲಿ ಫಿಸಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಸಮೀಪದ ಪಿ.ಜಿ. ಒಂದರಲ್ಲಿ ತಂಗಿದ್ದ ಇವರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಊಟ, ತಿಂಡಿಯ ಸಮಸ್ಯೆಯೊಂದಿಗೆ ಪಿ.ಜಿ.ಯನ್ನೂ ಖಾಲಿ ಮಾಡಬೇಕಾದ ಪರಿಸ್ಥಿತಿ ಬಂದಿತ್ತು.

ಈ  ವಿದ್ಯಾರ್ಥಿನಿಯರು ತಮ್ಮ ಸಂಕಷ್ಟವನ್ನು ಮನೆಯವರಿಗೆ ತಿಳಿಸಿದ್ದರು. ಆ ಪೈಕಿ ಓರ್ವ ವಿದ್ಯಾರ್ಥಿನಿಯ ತಂದೆ ತ್ರಿಶೂರು ಎಸ್.ಡಿ.ಪಿ.ಐ.‌ ನಾಯಕರ ಮೂಲಕ ಮಂಗಳೂರು ಎಸ್.ಡಿ.ಪಿ.ಐ. ನಾಯಕರನ್ನು ಸಂಪರ್ಕಿಸಿ ವಿದ್ಯಾರ್ಥಿನಿಯರ ಸಮಸ್ಯೆಯನ್ನು ತಿಳಿಸಿದ್ದರು. ಮಂಗಳೂರು ಎಸ್.ಡಿ.ಪಿ.ಐ.‌ ನಾಯಕರ ಸಲಹೆಯಂತೆ ಎಸ್.ಡಿ.ಪಿ.ಐ. ಕಾರ್ಯಕರ್ತ ಬದ್ರುದ್ದೀನ್ ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ನೆರವಿನ ಹಸ್ತ ಚಾಚಿದರು.

ಮೂಲತಃ ಕಲಾಯಿ ನಿವಾಸಿಯಾಗಿರುವ ಬದ್ರುದ್ದೀನ್ ಪ್ರಸಕ್ತ ಮಂಗಳೂರು ಕುದ್ರೋಳಿಯ ಜಾಮಾ ಮಸೀದಿ (ಜೋಡು ಪಳ್ಳಿ) ಬಳಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯೊಂದಿಗೆ ವಾಸವಿದ್ದಾರೆ.‌ ಈ ಮನೆಯನ್ನು ವಿದ್ಯಾರ್ಥಿನಿಯರಿಗೆ ಬಿಟ್ಟುಕೊಟ್ಟ ಬದ್ರುದ್ದೀನ್, ತಾನು, ತನ್ನ ಪತ್ನಿ, ಮಕ್ಕಳೊಂದಿಗೆ ಕುದ್ರೋಳಿ ಅಳಕೆಯಲ್ಲಿರುವ ಅತ್ತೆ ಮನೆಗೆ ತೆರಳಿ ಲಾಕ್ ಡೌನ್ ಮುಗಿಯುವ ವರೆಗೆ ಅಲ್ಲಿಯೇ ತಂಗಿದ್ದರು.

ಮೂರನೇ ಹಂತದ ಲಾಕ್ ಡೌನ್ ಮುಕ್ತಾಯದ ಬಳಿಕ ಆನ್ ಲೈನ್ ನಲ್ಲಿ ಪಾಸ್ ಪಡೆದು ವಿದ್ಯಾರ್ಥಿನಿಯರನ್ನು ಕೇರಳಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಬದ್ರುದ್ದೀನ್ ಮಾಡಿದ್ದರು.‌ ವಿದ್ಯಾರ್ಥಿನಿಯರನ್ನು ಕೇರಳ --ಕರ್ನಾಟಕ ಗಡಿಯಾದ ತಲಪಾಡಿಗೆ ಖುದ್ದು ಕರೆದುಕೊಂಡು ಹೋಗಿ ಬೀಳ್ಕೊಡುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತೆಗೆದ ಪೋಟೊವನ್ನು ಬದ್ರುದ್ದೀನ್ ಅವರು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬದ್ರುದ್ದೀನ್ ಅವರ ಮಾನವೀಯ ಕಳಕಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


ಎಸ್.ಡಿ.ಪಿ‌.ಐ. ಮಂಗಳೂರು ನಾಯಕರ ಮಾಹಿತಿಯಂತೆ ಸಂಕಷ್ಟದಲ್ಲಿದ್ದ ಮೂವರು ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ನಾವಿರುವ ಬಾಡಿಗೆ ಮನೆಯನ್ನು ಅವರ ವಾಸಕ್ಕೆ ಬಿಟ್ಟುಕೊಟ್ಟು ನಾನು ಮತ್ತು ನನ್ನ ಕುಟುಂಬ ಅತ್ತೆ ಮನೆಗೆ ವಾಸ ಸ್ಥಳವನ್ನು ಬದಲಾಯಿಸಿದೆವು. ಪಕ್ಷದಿಂದ ಕೊಟ್ಟ ಆಹಾರ ಸಾಮಗ್ರಿಗಳ ಕಿಟ್ ಸಹಿತ ಅವರಿಗೆ ಬೇಕಾದ ಸಕಲ ವ್ಯವಸ್ಥೆ ಮಾಡಿದ್ದೇವು. ಲಾಕ್ ಡೌನ್ ಸಡಿಲವಾದಾಗ ಆನ್ ಲೈನ್ ನಲ್ಲಿ ಪಾಸ್ ಪಡೆದು ಅವರನ್ನು ಅವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಮೂವರೂ ಸುರಕ್ಷಿತವಾಗಿ ಮನೆ ಸೇರಿದ್ದು ಕುಟುಂಬದವರೊಂದಿಗೆ ಸಂತೋಷದಲ್ಲಿದ್ದಾರೆ.

-ಬದ್ರುದ್ದೀನ್ ಕಲಾಯಿ


ಮಂಗಳೂರಿನಲ್ಲಿ ಫಿಸಿಯೋಥೆರಫಿ ವ್ಯಾಸಂಗ ಮಾಡುತ್ತಿದ್ದ ನಾನು ಮತ್ತು ಆದಿರಾ, ನಿಲೋಫರ್ ಎಂಬಿಬ್ಬರು ಪಿ.ಜಿ. ಒಂದರಲ್ಲಿ ವಾಸವಿದ್ದೆವು. ಲಾಕ್ ಡೌನ್ ಸಂದರ್ಭದಲ್ಲಿ ಪಿ.ಜಿ.ಯಿಂದ ಖಾಲಿ ಮಾಡುವಂತೆ ಪಿ.ಜಿ. ಮಾಲಕ ಒತ್ತಡ ಹೇರಿದರು. ನಿಲೋಫರ್ ಳ ತಂದೆ ಅಕ್ಬರ್ ಅವರು ಲತೀಫ್ ಎಂಬವರನ್ನು ಸಂಪರ್ಕಿಸಿ ಅವರ ಮೂಲಕ ಬದ್ರುದ್ದೀನ್ ನಮ್ಮನ್ನು ಸಂಪರ್ಕಿಸಿದರು. ಬದ್ರುದ್ದೀನ್ ಕುಟುಂಬ ಬೇರೆಡೆಗೆ ಸ್ಥಳಾಂತರಗೊಂಡು ಆ ಫ್ಲ್ಯಾಟ್ ನಲ್ಲಿ ನಮಗೆ ಮೂವರಿಗೆ ವಾಸಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಿ ಕೊಟ್ಟರು. ಕೊನೆಗೆ ನಮ್ಮನ್ನು ಊರಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಿದರು. ಅವರಿಂದ ನಮಗೆ ತುಂಬಾ ಸಹಾಯವಾಗಿದೆ.

- ಸೋನಿಯಾ, ವಿದ್ಯಾರ್ಥಿನಿ


ನಾನು ಮಂಗಳೂರಿನಲ್ಲಿ ಫಿಸಿಯೋಥೆರಫಿ ಕಳಿಯುತ್ತಿದ್ದೇನೆ. ನನ್ನ ಜೊತೆ ಆದಿರಾ, ಸೋನಿಯಾ ಎಂಬಿಬ್ಬರು ಜೊತೆಗಿದ್ದರು. ನಾವು ಒಟ್ಟಿಗೆ ಪಿ.ಜಿ.ಯಲ್ಲಿ ಇದ್ದೆವು. ಲಾಕ್ ಡೌನ್ ಸಂದರ್ಭದಲ್ಲಿ ಊಟ, ತಿಂಡಿಗೂ ನಾವು ಪರದಾಡಿದ್ದೆವು. ಇದೇ ಸಂದರ್ಭದಲ್ಲಿ ಪಿ.ಜಿ. ಖಾಲಿ ಮಾಡುವಂತೆ ಹೇಳಿದರು. ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇರಲಿಲ್ಲ. ನನ್ನ ತಂದೆಯ ಮೂಲಕ ಬದ್ರುದ್ದೀನ್ ಅವರ ಸಂಪರ್ಕ ಆಯಿತು. ಬದ್ರುದ್ದೀನ್ ಕುಟುಂಬ ಅವರ ಅತ್ತೆ ಮನೆಗೆ ವಾಸ ಬದಲಾಯಿಸಿ ಅವರ ಮನೆಯನ್ನು ನಮಗೆ ಬಿಟ್ಟುಕೊಟ್ಟರು. ಆಹಾರ ಸಾಮಗ್ರಿ ಸಹಿತ ಎಲ್ಲಾ ವ್ಯವಸ್ಥೆಯನ್ನು ಅವರು ಮಾಡಿಕೊಟ್ಟರು. ಅವರಿಂದ ಉಪವಾಸದ ಸಮಯದಲ್ಲಿ ನನಗೆ ತುಂಬಾ ಸಹಕಾರಿಯಾಗಿದೆ‌.

- ನಿಲೋಫರ್, ವಿದ್ಯಾರ್ಥಿನಿ


ಮಂಗಳೂರಿನಲ್ಲಿ ಫಿಸಿಯೋಥೆರಫಿ ವ್ಯಾಸಂಗ ಮಾಡುತ್ತಿದ್ದ ನಾವು ಪಿ.ಜಿ. ಒಂದರಲ್ಲಿ ವಾಸವಿದ್ದೆವು. ಕೋವಿಡ್ ಲಾಕ್ ಡೌನ್ ನಿಂದ ಆಹಾರಕ್ಕೂ ಸಂಕಷ್ಟ ಎದುರಿಸುವಂತಾಗಿತ್ತು. ಪಿ.ಜಿ.ಯನ್ನು ಖಾಲಿ ಮಾಡಲು ಮಾಲಕ ಹೇಳಿದಾಗ ವಾಸಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಯದಲ್ಲಿ ನಮ್ಮ ಸಹಾಯಕ್ಕೆ ಬಂದವರು ಬದ್ರುದ್ದೀನ್. ಅವರ ಮನೆಯನ್ನು ನಮಗೆ ನೀಡಿ, ಆಹಾರ ಸಾಮಗ್ರಿಗಳನ್ನು ನೀಡಿದರು. ಇದರಿಂದ ನಮಗೆ ದೊಡ್ಡ ಸಹಾಯವಾಗಿದೆ. 
- ಆದಿರಾ, ವಿದ್ಯಾರ್ಥಿನಿ

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News