ಮಹಾರಾಷ್ಟ್ರದಿಂದ ಬರುವವರ ಪಾಸ್ ತಡೆಯಲು ಸರಕಾರಕ್ಕೆ ಮನವಿ: ಕರಂದ್ಲಾಜೆ

Update: 2020-06-05 10:27 GMT

ಉಡುಪಿ, ಜೂ.5: ಉಡುಪಿ ಜಿಲ್ಲೆಯಲ್ಲಿ ಕೊರೋನ ಸ್ಫೋಟದ ನಂತರವೂ ಮಹಾರಾಷ್ಟ್ರದಿಂದ ಆನ್‌ಲೈನ್ ಅರ್ಜಿ ಸಲ್ಲಿಸಿ, ಪಾಸ್ ಪಡೆದು 281 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ. ಇಂದಿನ ಬೆಳವಣಿಗೆಯಿಂದ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿರುವುದರಿಂದ ಆನ್‌ಲೈನ್‌ನಲ್ಲಿ ಪಾಸ್ ನೀಡುವುದನ್ನು ತಡೆಯುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯ ಕೊರೋನ ಸೋಂಕಿತರಲ್ಲಿ ಬಹುತೇಕ ಮಂದಿ ಮಹಾರಾಷ್ಟ್ರದಿಂದ ಬಂದವರಿದ್ದಾರೆ. ಹೋಂ ಕ್ವಾರಂಟೇನ್‌ನಲ್ಲಿರುವ ಇವರಿಂದ ಮನೆಯವರು ಎಷ್ಟು ಮಂದಿಗೆ ಈ ವೈರಸ್ ಹರಡಿದೆ ಎಂಬುದು ಗೊತ್ತಿಲ್ಲ. ಇಂತಹ ಮನೆಯಲ್ಲಿರುವ ಇತರ ಕಾಯಿಲೆಯಿಂದ ಬಳಲುತ್ತಿರುವವರನ್ನು ನಾವು ರಕ್ಷಣೆ ಮಾಡಬೇಕಾಗಿದೆ ಎಂದರು.

ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರದಿಂದ ಬಹಳ ಕಡಿಮೆ ಜನ ಬಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಾಗಿದೆ. ಎಂಎಚ್‌ಐ ಮಾರ್ಗಸೂಚಿ ಪ್ರಕಾರ ಬರುವವರನ್ನು ತಡೆಯುವಂತಿಲ್ಲ. ಆದುದರಿಂದ ಮಹಾರಾಷ್ಟ್ರದಲ್ಲಿರುವ ಜಿಲ್ಲೆಯ ಜನತೆ ಸದ್ಯ ಉಡುಪಿಗೆ ಬಾರದಂತೆ ಮನವಿ ಮಾಡುತ್ತಿದ್ದೇನೆ. ನಮ್ಮಲ್ಲಿ ಬೆಡ್ ಮತ್ತು ಕ್ವಾರಂಟೈನ್ ಕೇಂದ್ರಗಳ ಕೊರತೆಗಳಿವೆ. ಆದುದರಿಂದ ಜನತೆ ಸಹಕಾರ ನೀಡಬೇಕು ಎಂದವರು ತಿಳಿಸಿದರು.

ಬೆಂಗಳೂರು ಸ್ಲಂಗಳಿಗೆ ತಬ್ಲೀಗಿಗಳು ಸೋಂಕು ಪಸರಿಸಿದ್ದಾರೆ. ಪಾದರಾಯಣಪುರ, ಸಿದ್ದೀಕ್ ಲೇಔಟ್‌ನಲ್ಲಿ ಉದ್ದೇಶಪೂರ್ವಕವಾಗಿ ಸೋಂಕು ಹರಡಿಸಲಾಗಿದೆ. ದೇಶದಲ್ಲಿ ಕೊರೋನ ಹಂಚಲು ತಬ್ಲೀಗಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರ ಸೂಕ್ತ ತನಿಖೆ ನಡೆಸಬೇಕು. ಇಲ್ಲಿನ ಅನ್ನ ತಿಂದವರು ರೋಗ ಹಬ್ಬಿಸಿದರೆ ಅವರಿಗೆ ಕ್ಷಮೆ ಇಲ್ಲ. ಅದೇ ಇವರಿಗೆ ಕುಮ್ಮಕ್ಕು ನೀಡುವ ಜನಪ್ರತಿನಿಧಿ, ಅಧಿಕಾರಿಗಳ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 119 ಕಿ.ಮೀ. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 203 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಕಾರದಿಂದ ವಿತರಿಸಲಾಗುವ ಪಡಿತರದಲ್ಲಿ ಜಿಲ್ಲೆ ಶೇ.94ರಷ್ಟು ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಲಾಲಾಜಿ ಆರ್. ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಮಹೇಶ್ ಠಾಕೂರು, ಕುತ್ಯಾರು ನವೀನ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News