ವಾಟ್ಸ್ ಆ್ಯಪ್ ಮೂಲಕ ಮಕ್ಕಳಿಗೆ ವಿಶೇಷ ತರಬೇತಿ ಶಿಬಿರ

Update: 2020-06-05 11:44 GMT

ಉಡುಪಿ, ಜೂ.5: ಲಾಕ್‌ಡೌನ್ ರಜಾ ಅವಧಿಯಲ್ಲಿ ಸೃಜನಾತ್ಮಕವಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರಥಮ ಪ್ರಯತ್ನವಾಗಿ 5ರಿಂದ 15ನೆ ವಯಸ್ಸಿನ ಮಕ್ಕಳಿಗೆ ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ರಜಾ- ಮಜಾ ಎಂಬ ವಾಟ್ಸ್ ಆ್ಯಪ್ ಗ್ರೂಪಿನ ಮೂಲಕ ಜೂ.1ರಿಂದ 10ರವರೆಗೆ ತರಬೇತಿ ಶಿಬಿರವನ್ನು ರಂಗಕರ್ಮಿ ನಾಗೇಶ್ ಕಾಮತ್ ಕಟಪಾಡಿ ಮತ್ತು ಶಿಕ್ಷಕ ದೀಪಕ್ ಬೀರ ಪಡುಬಿದ್ರಿ ಹಮ್ಮಿಕೊಂಡಿದ್ದಾರೆ.

ಇದು ವಾಟ್ಸ್ ಆ್ಯಪ್ ಮೂಲಕ ಸಂಪೂರ್ಣ ಉಚಿತವಾದ ಹತ್ತು ದಿನಗಳ ಶಿಬಿರವಾಗಿದ್ದು, ಮಕ್ಕಳಿಗೆ ಆವೆ ಮಣ್ಣಿನ ಕಲಾಕೃತಿ ರಚನೆ, ಜಾದು, ಸಂಗೀತ, ನೃತ್ಯ, ಬೆಂಕಿ ಇಲ್ಲದೆ ಅಡುಗೆ, ಬಾಟಲಿ ಪೇಂಟಿಂಗ್, ಮಕ್ಕಳ ಸಾಹಿತ್ಯದ ಬಗ್ಗೆ, ಚಿತ್ರಕಲೆ, ಕರಕುಶಲ ಕಲೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ವಿದೇಶದ ನೈರೋಬಿ, ಸಿಂಗಾಪುರ, ದುಬೈ, ಕುವೈಟ್ ಸೇರಿದಂತೆ ಭಾರತದ ವಿವಿಧ ರಾಜ್ಯ ಗಳಿಂದ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರಜಾ-ಮಜಾ ಎಂಬ ಮೂರು ವಾಟ್ಸಾಪ್ ಗ್ರೂಪಿನಲ್ಲಿ 250ರಂತೆ ಸುಮಾರು 700 ಅಧಿಕ ಮಕ್ಕಳು ಈ ಶಿಬಿರದಲ್ಲಿ ಭಾಗಿಗಳಾಗಿದ್ದಾರೆ.

ಜೂನ್ ಒಂದರಿಂದ ಆರಂಭವಾಗಿರುವ ಈ ಶಿಬಿರದಲ್ಲಿ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಸಂಪನ್ಮೂಲ ವ್ಯಕ್ತಿಗಳು ಮಾಡಿದ ಚಟುವಟಿಕೆಯ ವಿಡಿಯೋ ಹಾಕಲಾಗುತ್ತದೆ. ಅದನ್ನು ನೋಡಿ ಮಕ್ಕಳು ತಾವೇ ಮಾಡಿದ ಚಟುವಟಿಕೆಯ ವಿಡಿಯೋ ಅಥವಾ ಫೋಟೋವನ್ನು ಸಂಜೆ 6 ಗಂಟೆಯ ನಂತರ ತಾವಿರುವ ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಹಾಕಬಹುದಾಗಿದೆ. ಆದರೆ ಇದು ಕಡ್ಡಾಯವಲ್ಲ. ಆ ಸಮಯದಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳಲೂ ಅವಕಾಶವಿದೆ.

ಜಾದುವಿನ ಬಗ್ಗೆ ಜಾದುಗಾರರಾದ ಕುದ್ರೋಳಿ ಗಣೇಶ್, ಸತೀಶ್ ಹೆಮ್ಮಾಡಿ, ಬಳ್ಳಾರಿಯ ಪ್ರಕಾಶ್ ಹೆಮ್ಮಾಡಿ, ಚಿತ್ರ ರಚನೆ ಬಗ್ಗೆ ಪ್ರಸಾದ್ ರಾವ್, ಶೈಲೇಶ್, ಮನೋಜ್ ಪಾಂಗಾಳ, ಆವೆ ಮಣ್ಣಿನ ಕಲಾಕೃತಿ ರಚನೆ ಬಗ್ಗೆ ವೆಂಕಿ ಪಲಿ ಮಾರು, ಕ್ರಾಫ್ಟ್ ಬಗ್ಗೆ ರಮೇಶ್ ಬಂಟಕಲ್, ಪ್ರಸನ್ನ ಪ್ರಸಾದ್ ಭಟ್, ಮುಸ್ತಾಫ, ಸಂಗೀತದ ಬಗ್ಗೆ ಪ್ರಕಾಶ್ ಸುವರ್ಣ ಕಟಪಾಡಿ, ಮಮತಾ ಕಾಮತ್ ಮೈಸೂರು, ರೋಹಿತ್ ಮಲ್ಪೆ, ನೃತ್ಯದ ಬಗ್ಗೆ ವಂದನಾ ಕಾರ್ಕಳ, ದೀಕ್ಷಾ ಬ್ರಹ್ಮಾವರ, ಮಕ್ಕಳ ಸಾಹಿತ್ಯದ ಬಗ್ಗೆ ಸ್ಮಿತಾ ಬಲ್ಲಾಳ್ ಬೆಂಗಳೂರು, ದೀಪಕ್ ಬೀರ ಪಡುಬಿದ್ರಿ, ಬಾಟಲ್ ಪೇಂಟಿಂಗ್ ಬಗ್ಗೆ ಶ್ರೀನಾಥ್ ಮಣಿಪಾಲ, ಬೆಂಕಿ ರಹಿತ ಅಡುಗೆ ಬಗ್ಗೆ ಡಾ.ಹರ್ಷ ಕಾಮತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News