ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜಿನಾಮೆ ನೀಡಬೇಕು: ಅಮೃತ ಶೆಣೈ

Update: 2020-06-05 11:52 GMT

ಉಡುಪಿ, ಜೂ.5: ವಿಧಾನ ಮಂಡಲದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ)ಯ ಕರ್ತವ್ಯ ನಿರ್ವಹಣೆಗೆ ಸಂವಿಧಾನಬಾಹಿರ ತಡೆಯಾಜ್ಞೆ ನೀಡಿದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಅಮೃತ ಶೆಣೈ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲಿರುವ ಎಚ್.ಕೆ.ಪಾಟೀಲ್ ಹಾಗೂ ಪಿಎಸಿ ಸಮಿತಿಗೆ ನಮ್ಮ ಸಂಪೂರ್ಣ ನೈತಿಕ ಬೆಂಬಲವಿದೆ ಎಂದವರು ಹೇಳಿದರು.

ದೇಶಾದ್ಯಂತ ಕೊರೋನಾ ವೈರಾಣು ವ್ಯಾಪಕವಾಗಿ ಹರಡಿ ದೇಶ ಸಂಕಷ್ಟ ದಲ್ಲಿದ್ದ ಸಮಯದಲ್ಲಿ ಅದರ ಹರಡುವಿಕೆಯನ್ನು ತಡೆಯಲು ಅಗತ್ಯವಾದ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಅಕ್ರಮಗಳ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕಳೆದ ಎರಡು ತಿಂಗಳುಗಳಿಂದ ಸಾಮಾಜಿಕ ಜಾಲತಾಣವೂ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಧ್ವನಿಯೆತ್ತುತ್ತಾ ಬಂದಿದೆ ಎಂದವರು ಹೇಳಿದರು.

ರಾಜ್ಯ ಸರಕಾರದ ಕೆಡಿಎಲ್‌ಡಬ್ಲುಎಸ್ ಸಂಸ್ಥೆಯು ಈ ವಿಪತ್ತಿನ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಹತ್ತಾರು ಅಕ್ರಮಗಳನ್ನು ಎಸಗಿದೆಯಲ್ಲದೇ ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂ.ಗಳ ನಷ್ಟ ಉಂಟಾಗಿದೆ ಎಂದು ಅಮೃತ ಶೆಣೈ ಆರೋಪಿಸಿದರು.

ಸಂಶಯಾಸ್ಪದ ಕಂಪೆನಿಗಳಿಂದ ಕಳಪೆ ಗುಣಮಟ್ಟದ ಪಿಪಿಇ ಕಿಟ್‌ಗಳು, ಬಳಸಿದ್ದ ವೆಂಟಿಲೇಟರ್‌ಗಳನ್ನು ಕೆಡಿಎಲ್‌ಡಬ್ಲುಎಸ್ ಸಂಸ್ಥೆ ಖರೀದಿಸಿದ್ದು, ಸ್ಯಾನಿಟೈಸರ್‌ಗಳನ್ನು ಮಾರುಕಟ್ಟೆ ಬೆಲೆಯ ಎರಡೂವರೆ ಪಟ್ಟು ಹೆಚ್ಚು ಹಣ ಕೊಟ್ಟು ಖರೀದಿಸಿದೆ. ಈ ಮೂಲಕ 300 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಗರಣ ನಡೆದಿದೆ ಎಂಬುದು ನಮ್ಮ ಪಕ್ಷ ಕಂಡುಕೊಂಡಿದೆ ಎಂದವರು ಹೇಳಿದರು.

ಈ ಎಲ್ಲಾ ಅಕ್ರಮಗಳ ವಿರುದ್ಧ ನಮ್ಮ ಪಕ್ಷ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮೇ 12ರಂದು ದೂರು ದಾಖಲಿಸಿದೆ. ಅಲ್ಲದೇ ಶಾಸಕ ಎಚ್.ಕೆ.ಪಾಟೀಲ್ ಅಧ್ಯಕ್ಷತೆ ಪಿಎಸಿಗೂ ಲಿಖಿತ ದೂರು ಸಲ್ಲಿಸಿದೆ. ಈ ಕುರಿತು ತನಿಖೆ ನಡೆಸಲು ಪಿಎಸಿ ಮುಂದಾದಾಗ, ಸಮಿತಿ ಪರಿಶೀಲನೆಗೆ ನಿಗದಿಗೊಳಿಸಿದ್ದ ಉದ್ದೇಶಿತ ಭೇಟಿಗೆ ರಾಜ್ಯ ವಿಧಾನಸಭಾಧ್ಯಕ್ಷರಾದ ಕಾಗೇರಿ ಅವರು ಒಂದು ದಿನ ಮೊದಲು ತರಾತುರಿಯಿಂದ ತಡೆಯಾಜ್ಞೆ ನೀಡಿದ್ದಾರೆ. ಇದು ಸಂಪೂರ್ಣ ಸಂವಿಧಾನಬಾಹಿರ ಎಂದು ಅಮೃತ ಶೆಣೈ ಆರೋಪಿಸಿದರು.

ರಾಜ್ಯ ಸರಕಾರದ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಮುಚ್ಚಿ ಹಾಕಲು ಸಂವಿಧಾನಿಕ ಸಂಸ್ಥೆಯೊಂದರ ಅಸ್ತಿತ್ವವನ್ನು ನಾಶ ಮಾಡಲು ಸಭಾಧ್ಯಕ್ಷರು ಮುಂದಾಗಿದ್ದಾರೆ ಎಂದೂ ಅವರು ದೂರಿದರು. ಈ ಮೂಲಕ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿರುವ ಕಾಗೇರಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕೆಆರ್‌ಎಸ್ ಪಕ್ಷ ಆಗ್ರಹಿಸುತ್ತದೆ ಎಂದರು. ಅಲ್ಲದೇ ಈ ವಿಷಯವನ್ನು ರಾಜ್ಯಪಾಲರ ಗಮನಕ್ಕೂ ತರಲಿದ್ದು, ಸಭಾಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳಲು ರಾಜ್ಯಪಾಲರನ್ನು ಆಗ್ರಹಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪ್ರಸಾದ್ ಕರ್ಕಡ, ವಿನುತಾ ಕಿರಣ್, ಶಾಹಿದ್ ಅಲಿ, ಸಲ್ಮಾನ್ ಅಹ್ಮದ್, ಶಂಶುದ್ದೀನ್, ಸಫಾನ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News