ಮಂಗಳೂರು: ಬೀದಿ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ ವಿರುದ್ಧ ಹೋರಾಟದ ಎಚ್ಚರಿಕೆ

Update: 2020-06-05 12:42 GMT

ಮಂಗಳೂರು, ಜೂ.5: ಸಂಚಾರ ಮತ್ತು ಫುಟ್‌ಪಾತ್ ಅತಿಕ್ರಮಣದ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ ನಡೆಸುವ ಬಗ್ಗೆ ಮೇಯರ್ ಹೇಳಿಕೆಯನ್ನು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಮತ್ತು ಮಹಾನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯ ಬಿ.ಕೆ ಇಮ್ತಿಯಾಝ್ ಖಂಡಿಸಿದ್ದಾರೆ.

ನಗರದಲ್ಲಿ ಅನೇಕ ಕಡೆ ಬಿಲ್ಡರುಗಳು ರಸ್ತೆ ಮತ್ತು ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ್ದಾರೆ. ಅದರ ವಿರುದ್ಧ ಕ್ರಮಕೈಗೊಳ್ಳುವ ಬದಲು ಬೀದಿಬದಿ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸ. ಈಗಾಗಲೇ ಲಾಕ್‌ಡೌನ್ ಸಮಯದಲ್ಲಿ ದುಡಿಮೆಯಿಲ್ಲದೆ ಕಂಗಾಲಾಗಿದ್ದ ಬೀದಿ ವ್ಯಾಪಾರಿಗಳಿಗೆ ಟೈಗರ್ ಕಾರ್ಯಾಚರಣೆ ಮಾಡಲು ತೀರ್ಮಾನಿಸಿರುವುದು ಅಮಾನವೀಯ ವರ್ತನೆಯಾಗಿದೆ. ಲಾಕ್‌ಡೌನ್ ಕಾಲದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕನಿಷ್ಟ 1 ಕಿಲೋ ಅಕ್ಕಿಯನ್ನು ವಿತರಿಸಲು ಯೋಗ್ಯತೆ ಇಲ್ಲದ ಮನಪಾ ಆಡಳಿತವು ಅವರ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗಿರುವುದು ಅಕ್ಷಮ್ಯ. ನಗರಾಡಳಿತವು ಯಾರ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂಬುದು ಇದರಿಂದ ಸಾಬೀತಾಗುತ್ತಿದೆ. ಕೇಂದ್ರ ಮಾರುಕಟ್ಟೆ ಸ್ಥಳಾಂತರ ಮತ್ತು ಪರ್ಯಾಯ ಮಾರುಕಟ್ಟೆಗಾಗಿ ಬೀದಿಬದಿ ವ್ಯಾಪಾರ ವಲಯದ ಜಾಗವನ್ನು ಕೊಟ್ಟಿದ್ದಲ್ಲದೆ ಬೀದಿ ವ್ಯಾಪಾರ ನಡೆಯುತ್ತಿದ್ದ ಲೇಡಿಗೋಶನ್ ಮತ್ತು ಕೇಂದ್ರ ಮಾರುಕಟ್ಟೆಯ ಸುತ್ತಮುತ್ತ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಿ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಜೂ.8ರ ನಂತರ ಪೂರ್ಣ ಪ್ರಮಾಣದಲ್ಲಿ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಪಾಲಿಕೆ ಅಧಿಕಾರಿಗಳು ವ್ಯಾಪಾರಕ್ಕೆ ತೊಂದರೆ ನೀಡುವುದನ್ನು ಮುಂದುವರಿಸಿದಲ್ಲಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಬಿಕೆ ಇಮ್ತಿಯಾಝ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News