ಮಂಗಳೂರು: ಮುಂಬೈನಿಂದ ಮರಳಿದವರ ತಪಾಸಣೆಯಲ್ಲಿ ನಿರ್ಲಕ್ಷ್ಯ?

Update: 2020-06-05 13:30 GMT

ಮಂಗಳೂರು, ಜೂ.5: ಮುಂಬೈನಿಂದ ಮಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಲಸಿಗರನ್ನು ಸಮರ್ಪಕವಾಗಿ ತಪಾಸಣೆಗೆ ಒಳಪಡಿಸುವಲ್ಲಿ ರೈಲ್ವೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ಹರಿದಾಡುತ್ತಿದೆ. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಇದೇ ರೈಲು ನಿಲ್ದಾಣಕ್ಕೆ ಗುರುವಾರವೂ ನೂರಾರು ಸಂಖ್ಯೆಯಲ್ಲಿ ಮುಂಬೈನಿಂದ ವಲಸಿಗರು ಬಂದಿದ್ದು, ಅಲ್ಲಿಯೂ ತಪಾಸಣೆಯ ನಿರ್ಲಕ್ಷ್ಯ ಕಂಡುಬಂದಿದೆ ಎನ್ನಲಾಗುತ್ತಿದೆ. ಇದರಿಂದ ಜಿಲ್ಲೆಯ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಮಂಗಳೂರಿನ ರೈಲು ನಿಲ್ದಾಣಕ್ಕೆ ಮುಂಬೈನಿಂದ ಬಂದ 30 ವಲಸಿಗರನ್ನು ಯಾವುದೇ ತೆರನಾದ ತಪಾಸಣೆಗೆ ಒಳಪಡಿಸದೇ ಕೈಬಿಡಲಾಗಿದೆ. ಇಲ್ಲಿನ ಪೊಲೀಸರೂ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆಂದೂ ಹೇಳಲಾಗುತ್ತಿದೆ. ಆದರೆ ಈ ಲೋಪದಲ್ಲಿ ಜಿಲ್ಲಾಡಳಿತದ ಪಾತ್ರವಿದೆ ಎಂದು ಕಾಂಗ್ರೆಸ್ ಪಕ್ಷದ ಮಂಗಳೂರು ದಕ್ಷಿಣ ಕ್ಷೇತ್ರದ ಸಾಮಾಜಿಕ ಮಾಧ್ಯಮ ವಿಭಾಗದ ಸಹ ಸಂಯೋಜಕ ಮನ್ಸೂರ್ ಅಹ್ಮದ್ ಆರೋಪಿಸಿದ್ದಾರೆ.

ಮನ್ಸೂರ್ ಅಹ್ಮದ್ ತಮ್ಮ ಟ್ವಿಟರ್ ಖಾತೆಯಲ್ಲಿ ‘‘ಮಂಗಳೂರಿನ ರೈಲು ನಿಲ್ದಾಣಕ್ಕೆ ಮುಂಬೈನಿಂದ ಆಗಮಿಸಿದ 30 ಮಂದಿಯನ್ನು ಯಾವುದೇ ಅಧಿಕಾರಿಗಳು ತಪಾಸಣೆ ಮಾಡಿಲ್ಲ. ಮನೆಯಲ್ಲಿಯೇ ‘ಕ್ವಾರಂಟೈನ್’ ಎಂದು ಸೂಚನೆ ಸಿಕ್ಕಿದ್ದೇ ತಡ. ಮುಂಬೈನಿಂದ ಬಂದವರು ರಿಕ್ಷಾ, ಬಸ್ ಹತ್ತಿಕೊಂಡು ಮನೆಗೆ ಸೇರಿದರು. ಅಲ್ಲಿಗೆ ಜಿಲ್ಲೆಯ ಜನರು ಲಾಕ್ ಡೌನ್ ನೆಪದಲ್ಲಿ ಮನೆಯಲ್ಲಿದ್ದದ್ದು ಮಣ್ಣು ಪಾಲಾಯಿತು’ ಎಂದು ಬರೆದುಕೊಂಡಿದ್ದಾರೆ.

ಮಂಗಳೂರು ರೈಲು ನಿಲ್ದಾಣಕ್ಕೆ ಬರುವ ಎಲ್ಲ ಪ್ರಯಾಣಿಕರನ್ನು ಕೊವೀಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ತಪಾಸಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎನ್ನುವ ಆರೋಪ ಆಧಾರರಹಿತವಾದುದು.
- ಎಂ.ಕೆ. ಗೋಪಿನಾಥ್, ಸಾರ್ವಜನಿಕ ಸಂಪರ್ಕಾಧಿಕಾರಿ, ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News