ಬಂಟ್ವಾಳ: ನಾಲ್ಕು ಪ್ರತ್ಯೇಕ ಅಪಘಾತ; ಚಾಲಕರು, ಪ್ರಯಾಣಿಕರು ಅಪಾಯದಿಂದ ಪಾರು

Update: 2020-06-05 13:34 GMT

ಬಂಟ್ವಾಳ, ಜೂ. 5: ಬಂಟ್ವಾಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಶುಕ್ರವಾರ ನಾಲ್ಕು ಪ್ರತ್ಯೇಕ ಅಪಘಾತ ಸಂಭವಿಸಿದ್ದು ವಾಹನ ಚಾಲಕರು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. 

ಮರದ ದಿಮ್ಮಿಗಳನ್ನು ಹೇರಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಢಿಕ್ಕಿಯಾಗಿ ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲಿನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.

ಘಟನೆಯಿಂದ ಲಾರಿ ಜಖಂ ಗೊಂಡಿದೆ. ವಿದ್ಯುತ್ ಕಂಬಗಳು ಧರೆಗುರುಳಿದೆ‌. ವಿದ್ಯುತ್ ತಂತಿಗಳು ತುಂಡಾಗಿ ನಷ್ಟ ಸಂಭವಿಸಿದೆ. ಲಾರಿ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. 

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೇರಮೊಗರು ಸಮೀಪ ಮಾರುತಿ 800 ಕಾರೊಂದು ರಸ್ತೆಯಿಂದ ಸುಮಾಡಿ ಅಡಿ ಕೆಳಗೆ ಉರುಳಿ ಬಿದ್ದಿದೆ. ಕಾರಿ‌ನಲ್ಲಿದ್ದ ಪ್ರಯಾಣಿಕರು ಮತ್ತು ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ. 

ಬಂಟ್ವಾಳ ತಾಲೂಕಿನ ಮಾಣಿ ಸಮೀದ ಬುಡೋಳಿ ಜಂಕ್ಷನಲ್ಲಿ ಮಾಣಿ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರೊಂದು ನಡು ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. 

ನೇರಳಕಟ್ಟೆ ಸಮೀಪದ ಕೊಡಾಜೆ ಮಸೀದಿ ಬಳಿಯ ಅಪಾಯಕಾರಿ ತಿರುವಿನಲ್ಲಿ ಟ್ಯಾಂಕರ್ ಲಾರಿಯೊಂದು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. 

ಸ್ಥಳಕ್ಕೆ ವಿಟ್ಲ ಪ್ರಭಾರ ಎಸ್ಸೈ ರಾಜೇಶ್ ಕೆ.ವಿ. ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News