ಮುಲ್ಕಿ: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನ ಕೊಲೆ; ಮೂವರು ಗಂಭೀರ

Update: 2020-06-05 17:57 GMT
ಅಬ್ದುಲ್ ಲತೀಫ್

ಮುಲ್ಕಿ, ಜೂ.5: ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಉದ್ಯಮಿಯೋರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಮುಲ್ಕಿ ಬಸ್ ನಿಲ್ದಾಣದ ವಿಜಯ ಸನ್ನಿಧಿ ಬಳಿಯ ಬ್ಯಾಂಕೊಂದರ ಎದುರುಗಡೆ ಶುಕ್ರವಾರ ಸಂಜೆ ನಡೆದಿದೆ.

ಮೃತರನ್ನು ಮೂಲತಃ ಪುತ್ತೂರು ತಾಲೂಕು ಮುರುಳ್ಯ ನಿವಾಸಿ, ಸದ್ಯ ಮೂಡುಬಿದಿರೆಯಲ್ಲಿ ವಾಸ್ತವ್ಯವಿರುವ ಉದ್ಯಮಿ ಅಬ್ದುಲ್ಲತೀಫ್ (36) ಎಂದು ಗುರುತಿಸಲಾಗಿದೆ. ಹೊಡೆದಾಟದಲ್ಲಿ ಗಂಭೀರ ಗಾಯಗೊಂಡವರನ್ನು ಮುಲ್ಕಿ ಕಾರ್ನಾಡು ದರ್ಗಾ ರಸ್ತೆಯ ಬಳಿಯ ನಿವಾಸಿಗಳಾದ ಮುನೀರ್, ಇಯಾಝ್, ಇಮ್ರಾನ್ ಎಂದು ತಿಳಿದು ಬಂದಿದೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದ್ಯಮಿ ಮುನೀರ್ ಕಾರ್ನಾಡ್ ತಮ್ಮ ಮಗ ಇಯಾಝ್ ಹಾಗೂ ಅಬ್ದುಲ್ಲತೀಫ್ ಮತ್ತಿತರರೊಂದಿಗೆ ಮುಲ್ಕಿಯ ಬ್ಯಾಂಕಿಗೆ ಕಾರಿನಲ್ಲಿ ಬಂದಿದ್ದರೆನ್ನಲಾಗಿದೆ. ಈ ವೇಳೆ ಬೈಕ್ ಮತ್ತು ಕಾರಿನಲ್ಲಿ ಬಂದಿದ್ದರೆನ್ನಲಾದ ಸುಮಾರು 6-7 ಮಂದಿ ದುಷ್ಕರ್ಮಿಗಳು ಮುನೀರ್ ಮತ್ತಿತರರ ಮೇಲೆ ಸೋಡಾ ಬಾಟಲಿ, ಮರದ ತುಂಡು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ಮುನೀರ್, ಇಯಾಝ್, ಇಮ್ರಾನ್ ಅವರನ್ನು ಖಾಸಗಿ ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಬ್ದುಲ್ಲತೀಫ್ ದಾರಿಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ಅಬ್ದುಲ್ಲತೀಫ್, ಮುನೀರ್ ಕಾರ್ನಾಡು ಅವರ ಮಗಳ ಗಂಡ ಎಂದು ತಿಳಿದು ಬಂದಿದೆ.

ಉದ್ಯಮಿ ಮುನೀರ್ ಕಾರ್ನಾಡು ಅವರ ಮೇಲಿನ ಹಳೆಯ ವೈಷಮ್ಯದಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಂಗಳೂರು ಎಸಿಪಿ ಬೆಳ್ಳಿಯಪ್ಪ, ಮುಲ್ಕಿ ಪೊಲೀಸ್ ಠಾಣಾಧಿಕಾರಿ ಇನ್‌ಸ್ಪೆಕ್ಟರ್ ಜಯರಾಮ ಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News