ಲಾಕ್ ಡೌನ್ ಸಂಕಷ್ಟ: ಮಿತ್ತಬೈಲ್ ಮಸೀದಿ ಅಧೀನದ ಅಂಗಡಿಗಳ ಬಾಡಿಗೆ ಮನ್ನಾ

Update: 2020-06-05 14:24 GMT

ಬಂಟ್ವಾಳ, ಜೂ. 5: ಕೋವಿಡ್ - 19 (ಕೊರೋನ) ಲಾಕ್ ಡೌನ್ ಹಾಗೂ ಆ ಬಳಿಕ ವ್ಯಾಪಾರದಲ್ಲಿ ಕುಂಠಿತ ಹಿನ್ನೆಲೆಯಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಅಧೀನದ ಬಾಡಿಗೆ ಅಂಗಡಿಗಳ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿ ಆಡಳಿತ ಕಮಿಟಿ ಆದೇಶ ಹೊರಡಿಸಿದೆ. 

ಎಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿ ಆದೇಶ ಹೊರಡಿಸಿರುವ ಮಿತ್ತಬೈಲ್ ಮಸೀದಿಯ ಆಡಳಿತ ಮಂಡಳಿ ಲಾಕ್ ಡೌನ್ ಹಾಗೂ ಆ ಬಳಿಕ ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟದಲ್ಲಿರುವ ಬಾಡಿಗೆದಾರರಿಗೆ ನೆರವಾಗಿದೆ. 20ರಷ್ಟು ಅಂಗಡಿಗಳ ಒಂದು ಲಕ್ಷ ರೂಪಾಯಿಗೂ ಅಧಿಕ ಬಾಡಿಗೆ ಮನ್ನಾ ಮಾಡಿದೆ. 

ಲಾಕ್ ಡೌನ್ ಅವಧಿಯಲ್ಲಿ ಮಿತ್ತಬೈಲ್ ಮಸೀದಿಯ ವತಿಯಿಂದ ಜಮಾಅತ್ ನ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಹಾಗೂ ಜಮಾಅತ್ ವ್ಯಾಪ್ತಿಯಲ್ಲಿರುವ ಸರ್ವ ಧರ್ಮಗಳ ಅರ್ಹ ಕುಟುಂಬಗಳಿಗೂ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿತ್ತು. ಇದೀಗ ಮಸೀದಿಯ ಆಧೀನದಲ್ಲಿರುವ ಅಂಗಡಿಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಮಾದರಿಯಾಗಿದೆ.  

"ಕೊರೋನ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಅಂಗಡಿಗಳ ಮಾಲಕರೂ ವ್ಯಾಪಾರ ಇಲ್ಲದೆ ಸಮಸ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಮಸೀದಿಯ ಆಧೀನದ ಎಲ್ಲಾ ಅಂಗಡಿಗಳ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಲಾಗಿದೆ. ಮಹಾ ಮಾರಿ ಕೊರೋನ ವೈರಸ್ ನಿಂದ ವಿಶ್ವವೇ ನಡುಗಿದೆ. ಕೊರೋನದಿಂದ ವಿಶ್ವ ಆದಷ್ಟು ಬೇಗ ಮುಕ್ತವಾಗಲಿ ಎಂದು ಪ್ರಾರ್ಥಿಸೋಣ" ಎಂದು ಮಿತ್ತಬೈಲ್ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಎ.ಕೆ.ಅಬ್ದುಲ್ ಹಮೀದ್ ಹಾಜಿ ತಿಳಿಸಿದ್ದಾರೆ. 

ಮಿತ್ತಬೈಲ್ ಮಸೀದಿಗೆ ಸೇರಿದ ಕಟ್ಟಡದಲ್ಲಿ 13 ವರ್ಷಗಳಿಂದ ಬಾಡಿಗೆಯಲ್ಲಿದ್ದೇನೆ. 14 ಅಂಗಡಿಗಳನ್ನು ನಾನು ಬಾಡಿಗೆಗೆ ಪಡೆದಿದ್ದು ಫರ್ನಿಚರ್ ವ್ಯಾಪಾರ ಮಾಡುತ್ತಿದ್ದೇನೆ. ಎಪ್ರಿಲ್ ನ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿರುವುದು ತುಂಬಾ ಖುಷಿಯಾಗಿದೆ. ನಿನ್ನೆ ಮೀಟಿಂಗ್ ನಲ್ಲಿ ಈ ಬಗ್ಗೆ ನಿರ್ಧರಿಸಿ ತಿಳಿಸಿದ್ದಾರೆ. ಮೇ ತಿಂಗಳ ಬಾಡಿಗೆಯೂ ಕೊಡಲು ಅವಸರ ಮಾಡಬೇಡಿ ಎಂದಿದ್ದಾರೆ. ಇದರಿಂದ ತುಂಬಾ ಉಪಕಾರ ಆಗಿದೆ. 

- ಶಶಿಧರ್ ಬಾಳಿಗ, ಬಾಡಿಗೆಯಲ್ಲಿರುವ ಲಕ್ಷ್ಮೀ ಗಣೇಶ್ ಫರ್ನಿಚರ್ ಮಾಲಕ 

ಲಾಕ್ ಡೌನ್ ನಿಂದ ವ್ಯಾಪಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿರುವುದು ಉತ್ತಮ ಕೆಲಸ‌. ಮಿತ್ತಬೈಲ್ ಮಸೀದಿಗೆ ಸೇರಿದ ಕಟ್ಟಡದಲ್ಲಿ ನಾನು ಆರು ಅಂಗಡಿಗಳನ್ನು ಬಾಡಿಗೆಗೆ ಪಡೆದಿದ್ದೇನೆ. ಜನರ, ವ್ಯಾಪಾರಿಗಳ ಕಷ್ಟಗಳನ್ನು ಗಮನಿಸಿ ಬಾಡಿಗೆ ಮನ್ನಾ ಮಾಡಿರುವ ಮಿತ್ತಬೈಲ್ ಮಸೀದಿಯ ಆಡಳಿತ ಮಂಡಳಿಯ ಈ ಕೆಲಸ ಇತರ ಬಾಡಿಗೆ ಅಂಗಡಿ, ಮನೆಗಳನ್ನು ಹೊಂದಿರುವವರಿಗೆ ಮಾದರಿಯಾಗಿದೆ. 

- ಜಮಾಲುದ್ದೀನ್, ಬಾಡಿಗೆದಾರ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News