ಉಡುಪಿಯಲ್ಲಿ ಶುಕ್ರವಾರ ಕೊರೋನ ‘ಮಹಾಸ್ಫೋಟ’

Update: 2020-06-05 14:53 GMT
ಸಾಂದರ್ಭಿಕ ಚಿತ್ರ

ಉಡುಪಿ, ಜೂ.5: ನೋವೆಲ್ ಕೊರೋನ ವೈರಸ್‌ನ (ಕೋವಿಡ್-19) ಮಹಾಸ್ಫೋಟವೊಂದು ಶುಕ್ರವಾರ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದೆ. ರಾಜ್ಯದ ಹಿಂದಿನೆಲ್ಲಾ ದಾಖಲೆಗಳನ್ನು ಮುರಿದು ಉಡುಪಿ ಜಿಲ್ಲೆಯೊಂದರಲ್ಲೇ ಕೊರೋನ ಪಾಸಿಟಿವ್ ಸಂಖ್ಯೆ ದ್ವಿಶತಕದ ಗಡಿ ದಾಟಿತು. ಉಡುಪಿ ಜಿಲ್ಲೆಯೊಂದರಲ್ಲೇ ಇಂದು 204 ಕೊರೋನ ಸೋಂಕಿತರು ಕಂಡುಬಂದಿದ್ದು, ರಾಜ್ಯದಲ್ಲಿ ಇದು ಒಟ್ಟಾರೆಯಾಗಿ 515 ಆಗಿದೆ.

ಜಿಲ್ಲೆಯಲ್ಲೀಗ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 767ಕ್ಕೇರಿದೆ. ಈ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮೊದನೆಯ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಕಲಬುರಗಿ (552), ಮೂರನೇ ಸ್ಥಾನದಲ್ಲಿರುವ ಬೆಂಗಳೂರು ನಗರ (434), ನಾಲ್ಕನೇ ಸ್ಥಾನದಲ್ಲಿರುವ ಯಾದಗಿರಿ (373) ಹಾಗೂ ಐದನೇ ಸ್ಥಾನದಲ್ಲಿರುವ ರಾಯಚೂರು (356) ಜಿಲ್ಲೆಗಳಿದೆ. ಆರೋಗ್ಯ ಇಲಾಖೆಯ ಮೂಲಗಳಂತೆ ನಾಳೆಯೂ ದೊಡ್ಡ ಸಂಖ್ಯೆಯ ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ.

ಇಂದು ಸೋಂಕು ಪತ್ತೆಯಾದ 204 ಮಂದಿಯಲ್ಲಿ 203 ಮಂದಿ ಮಹಾರಾಷ್ಟ್ರದಿಂದ ಬಂದವರು. ಓರ್ವ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಬ್ರಹ್ಮಾವರ ಠಾಣೆಯ ಪೊಲೀಸ್ ಸಿಬ್ಬಂದಿಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

204 ಮಂದಿಯಲ್ಲಿ 157 ಮಂದಿ ಪುರುಷರು, 40 ಮಹಿಳೆಯರು ಹಾಗೂ 10 ವರ್ಷದೊಳಗಿನ ಏಳು ಮಕ್ಕಳು ಸೇರಿದ್ದಾರೆ. ಇಂದಿನ 204 ಮಂದಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 767 ಮಂದಿ ಸೋಂಕು ಪೀಡಿತರು ಪತ್ತೆಯಾಗಿದ್ದು, ಸದ್ಯಕ್ಕೆ 634 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಅವರು ಹೇಳಿದರು.

ಶುಕ್ರವಾರ ಪಾಸಿಟಿವ್ ಪ್ರಕರಣ ಕಂಡುಬಂದವರಲ್ಲಿ 161 ಮಂದಿ ಬೈಂದೂರು ತಾಲೂಕಿನವರು. ಉಳಿದಂತೆ ಕುಂದಾಪುರ ತಾಲೂಕಿನ 34 ಮಂದಿ, ಕಾರ್ಕಳ ತಾಲೂಕಿನ 4, ಕಾಪುವಿನ 2 ಹಾಗೂ ಉಡುಪಿ, ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕುಗಳ ತಲಾ ಒಬ್ಬರು ಇದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಇಂದು ಪಾಸಿಟಿವ್ ಬಂದವರಲ್ಲಿ ಎಲ್ಲರನ್ನೂ ಗುರುತಿಸಲಾಗಿದ್ದು, ಈ ಸಂಜೆಯವರೆಗೆ ಒಟ್ಟು 143 ಮಂದಿಯನ್ನು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದವರನ್ನು ಅವರ ಮನೆಯಿಂದ ಕರೆದು ಕೊಂಡು ಬಂದು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸುವ ಕಾರ್ಯ ನಡೆಯುತ್ತಿದೆ ಎಂದು ಡಿಎಚ್‌ಓ ತಿಳಿಸಿದರು.

ಮತ್ತೆ 24 ಮಂದಿ ಬಿಡುಗಡೆ:  ಕೊರೋನ ಪಾಸಿಟಿವ್ ಬಂದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ಇನ್ನೂ 24 ಮಂದಿಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ. ಇವರಲ್ಲಿ 10 ಮಂದಿ ಕಾರ್ಕಳ ಕೋವಿಡ್ ಆಸ್ಪತ್ರೆಯಲ್ಲಿದ್ದವರಾದರೆ, ಉಳಿದ 14 ಮಂದಿ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದವರು. ಈ ಮೂಲಕ ಚಿಕಿತ್ಸೆಯ ಬಳಿಕ ಗುಣಮುಖರಾದ ಸೋಂಕಿತರ ಸಂಖ್ಯೆ ಈಗ 132ಕ್ಕೇರಿದೆ. ಜಿಲ್ಲೆಯಲ್ಲೀಗ 634 ಸಕ್ರೀಯ ಪ್ರಕರಣಗಳಿವೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

204 ಪಾಸಿಟಿವ್, 767 ಸ್ಯಾಂಪಲ್ ನೆಗೆಟಿವ್: ಶುಕ್ರವಾರ ಜಿಲ್ಲೆ ಯಲ್ಲಿ ಒಟ್ಟು 971 ಸ್ಯಾಂಪಲ್‌ಗಳ ವರದಿ ಬಂದಿದ್ದು, ಇವುಗಳಲ್ಲಿ 204 ಪಾಸಿಟಿವ್ ಆಗಿದ್ದರೆ, ಉಳಿದ 767 ಸೋಂಕಿಗೆ ನೆಗೆಟಿವ್ ಆಗಿವೆ. ಅಲ್ಲದೇ ಇಂದು ಕೇವಲ ಎಂಟು ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪಡೆಯಲಾಗಿದ್ದು, ಇವರಲ್ಲಿ ಕೋವಿಡ್ ಸಂಪರ್ಕಿತರು ನಾಲ್ವರಾದರೆ, ಒಬ್ಬರು ಉಸಿರಾಟ ತೊಂದರೆ ಹಾಗೂ ಮೂರು ಮಂದಿ ಶೀತಜ್ವರದಿಂದ ಬಳಲುವವರು ಎಂದು ಡಾ.ಸೂಡ ತಿಳಿಸಿದರು.

ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲುದ್ರವದ ಮಾದರಿಗಳ ಸಂಖ್ಯೆ ಈಗ 12,528ಕ್ಕೇರಿದೆ. ಇವುಗಳಲ್ಲಿ ಶುಕ್ರವಾರದವರೆಗೆ ಒಟ್ಟು 11,759ರ ಪರೀಕ್ಷಾ ವರದಿ ಬಂದಿವೆ. ಇದರಲ್ಲಿ 10,992 ನೆಗೆಟಿವ್ ಆಗಿದ್ದರೆ, ಇಂದಿನ 204 ಸೇರಿ ಒಟ್ಟು 767 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 769 ಸ್ಯಾಂಪಲ್‌ಗಳ ವರದಿ ಬರೇಕಾಗಿದೆ ಎಂದು ಅವರು ಹೇಳಿದರು.

ಇಂದು ರೋಗದ ಗುಣಲಕ್ಷಣದೊಂದಿಗೆ ಒಟ್ಟು 14 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 9 ಮಂದಿ ಪುರುಷರು, ಐವರು ಮಹಿಳೆಯರು. ಕೊರೋನ ಶಂಕಿತರು ಮೂವರು, ಉಸಿರಾಟದ ತೊಂದರೆಯ 11ಮಂದಿ ಇದರಲ್ಲಿ ಸೇರಿದ್ದಾರೆ.

ಶುಕ್ರವಾರ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ 10 ಮಂದಿ ಬಿಡುಗಡೆಗೊಂಡಿದ್ದು, 68 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 758 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆ ಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 17 ಮಂದಿ ಇಂದು ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5019 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4270 ಮಂದಿ (ಇಂದು 39) 28 ದಿನಗಳ ನಿಗಾವಣೆ ಹಾಗೂ 4829 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗಲೂ 115 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 279 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದು, ಹೆಚ್ಚಿನವರು ನಿನ್ನೆ ಮುಂಬಯಿ ಯಿಂದ ರೈಲಿನಲ್ಲಿ ಉಡುಪಿಗೆ ಬಂದವರಾಗಿದ್ದಾರೆ. ಕೇವಲ 7 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

ಜಿಲ್ಲೆಯಲ್ಲಿನ್ನು ಪಾಸಿಟಿವ್ ಪ್ರಕರಣ ಇಳಿಮುಖ: ಜಿಲ್ಲಾಧಿಕಾರಿ
ಉಡುಪಿ ಜಿಲ್ಲೆಯಲ್ಲಿಂದು 204 ಪ್ರಕರಣ ಪಾಸಿಟಿವ್ ಬಂದಿವೆ. ಸುಮಾರು 2000ಕ್ಕಿಂತ ಹೆಚ್ಚು ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ್ದರಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇದರಲ್ಲಿ 203 ಪ್ರಕರಣ ಮುಂಬಯಿ ಮೂಲದ್ದು, ಒಂದು ಸ್ಥಳೀಯ ಪ್ರಕರಣವಿದ್ದು ಅದು ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಯದ್ದು. 204 ಪಾಸಿಟಿವ್ ಪ್ರಕರಣದಲ್ಲಿ 157 ಪುರುಷರು, 40 ಮಹಿಳೆಯರು ಹಾಗೂ ಏಳು ಮಕ್ಕಳಿದ್ದಾರೆ. ಇವರೆಲ್ಲರನ್ನೂ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಉಡುಪಿ ಜಿಲ್ಲೆಗೆ ಹೊರರಾಜ್ಯ, ಹೊರದೇಶಗಳಿಂದ ಬಂದಿರುವ 8000ಕ್ಕೂ ಅಧಿಕ ಮಂದಿಯ ಗಂಟಲು ದ್ರವದ ಪರೀಕ್ಷೆ ಇಂದು ಸಂಜೆಯೊಳಗೆ ಮುಗಿಯುವ ನಿರೀಕ್ಷೆ ಇದೆ. ಒಮ್ಮೆ ಎಲ್ಲಾ ಟೆಸ್ಟ್‌ಗಳು ಮುಗಿದ ಬಳಿಕ ಪಾಸಿಟಿವ್ ಬರುವ ಸಂಖ್ಯೆ ಕಡಿಮೆಯಾಗಲಿದೆ. ಆ ಬಳಿಕ ನಾವು ಉಸಿರಾಟದ ತೊಂದರೆ (ಎಸ್‌ಎಆರ್‌ಐ ಕೇಸ್) ಹಾಗೂ ಶೀತಜ್ವರದ (ಐಎಲ್‌ಐ)ಪ್ರಕರಣಗಳನ್ನು ತೀವ್ರವಾಗಿ ತಪಾಸಣೆಗೊಳಪಡಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News