ನಾಪತ್ತೆಯಾಗಿದ್ದ ವ್ಯಕ್ತಿ ಮೂಲ್ಕಿ ಆಸ್ಪತ್ರೆಯಲ್ಲಿ ಪತ್ತೆ

Update: 2020-06-05 15:29 GMT

ಮಂಗಳೂರು, ಜೂ. 3: ಇದೇ ತಿಂಗಳ 21ರಂದು ಮನೆಯಿಂದ ತೆರಳಿ ನಾಪತ್ತೆಯಾಗಿದ್ದ ನಗರದ ಬಜಾಲ್ ಶಾಫಿ ಕ್ಲಿನಿಕ್ ಬಳಿಯ ಬಾಡಿಗೆ ಮನೆಯ ನಿವಾಸಿ ಉತ್ತರ ಪ್ರದೇಶ ಮೂಲದ ರಾಮೇಶ್ವರ ಸಹಾನಿ (45) ಅವರು ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದಾರೆ.

ತನ್ನ ಊರಿಗೆ ಹೊರಟಿದ್ದ ಅವರು ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದಾಗ ಮೂಲ್ಕಿ ಬಳಿ ಯಾವುದೋ ವಾಹನ ಢಿಕ್ಕಿ ಹೊಡೆದು ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಮೂಲ್ಕಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ಸಿಬ್ಬಂದಿಗೆ ಇವರ ಹೆಸರು ಸರಿಯಾಗಿ ತಿಳಿಯದ ಕಾರಣ ಅಪಘಾತದ ಬಗ್ಗೆ ವಿಷಯ ಬೆಳಕಿಗೆ ಬಂದಿರಲಿಲ್ಲ. ಆದರೆ ಅವರಿಗೆ ಚಿಕಿತ್ಸೆ ನೀಡಿದ್ದರು.

ಅವರು ನಾಪತ್ತೆಯಾದ ಬಗ್ಗೆ ಜೂ.4ರಂದು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯನ್ನು ಆಸ್ಪತ್ರೆಯ ವೈದ್ಯರು ಗಮನಿಸಿ ಶುಕ್ರವಾರ ಕಂಕನಾಡಿ ಠಾಣೆಯ ಪೊಲೀಸರಿಗೆ ಕರೆ ಮಾಡಿ ನಾಪತ್ತೆಯಾದ ವ್ಯಕ್ತಿ ತಮ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದ್ದಾರೆ.

ಇದೇ ವೇಳೆ ಸಣ್ಣ ಪುಟ್ಟ ಗಾಯಗೊಂಡಿದ್ದ ರಾಮೇಶ್ವರ ಸಹಾನಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫರ್ನಿಚರ್ ಪಾಲಿಶ್ ಕೆಲಸ ಮಾಡುತ್ತಿದ್ದ ರಾಮೇಶ್ವರ ಸಹಾನಿ ಅವರು ಲಾಕ್‌ಡೌನ್ ಸಡಿಲವಾದ ಬಳಿಕ ಊರಿಗೆ ಹೋಗಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದು, ಅದಕ್ಕೆ ಮನೆಯಲ್ಲಿದ್ದ ಮಕ್ಕಳು ಮತ್ತು ಸಂಬಂಧಿಕರು ಅಸಮ್ಮತಿ ಸೂಚಿಸಿದ್ದರು. ಆದರೆ ಮೇ 21ರಂದು ಅವರು ಮನೆಯಿಂದ ದಿಢೀರನೆ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಸ್ವಿಚ್‌ ಆಫ್ ಆಗಿತ್ತು. ಅತ್ತ ಊರಿಗೂ ತಲುಪದೆ, ಇತ್ತ ಬಜಾಲ್‌ನ ಬಾಡಿಗೆ ಮನೆಗೂ ಹಿಂದಿರುಗದ ಕಾರಣ ಅವರ ಪುತ್ರ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಜೂ.3ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News