ಭಟ್ಕಳ: ಆಂಧ್ರಪ್ರದೇಶದಿಂದ ಬಂದ ಮಹಿಳೆಗೆ ಕೊರೋನ ಸೋಂಕು ದೃಢ

Update: 2020-06-05 16:17 GMT

ಭಟ್ಕಳ: ಆಂಧ್ರಪ್ರದೇಶದಿಂದ ಭಟ್ಕಳಕ್ಕೆ ಬಂದ ಮಹಿಳೆಯೊಬ್ಬರಿಗೆ ಶುಕ್ರವಾರದಂದು ಕೊರೋನ ಸೋಂಕು ದೃಢಪಟ್ಟಿದೆ. ಆಂಧ್ರಪ್ರದೇಶದ ವಿಜಯವಾಡದಿಂದ ಬೆಂಗಳೂರಿಗೆ ಬಂದು ಅಲ್ಲಿ ವಾಸ್ತವ್ಯ ಹೂಡಿ ನಂತರ ಕುಂದಾಪುರಕ್ಕೆ ಸರ್ಕಾರಿ ಬಸ್ಸಿನಲ್ಲಿ ಬಂದು ಅಲ್ಲಿಂದ ಟ್ಯಾಕ್ಸಿಯಲ್ಲಿ ಭಟ್ಕಳ ತಲುಪಿದ, ಇಲ್ಲಿನ ಮಗ್ದೂಮ್ ಕಾಲೋನಿಯ 29 ವರ್ಷದ ಮಹಿಳೆಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.

ಮೇ 31 ರಂದು ಭಟ್ಕಳಕ್ಕೆ ಬಂದಿದ್ದ ಮಹಿಳೆಯನ್ನು ಎರಡು ದಿನಗಳ ವರೆಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೂನ್ 2ರಂದು ಮನೆಗೆ ಬಿಡುಗಡೆಗೊಳಿಸಿದ್ದಾರೆ. ಗುರುವಾರ ಸಂಜೆ ಆ ಮಹಿಳೆಯ ಸ್ವ್ಯಾಬ್ ಟೆಸ್ಟ್ ಫಲಿತಾಂಶ ಪಾಸಿಟಿವ್ ಆಗಿದ್ದು, ಶುಕ್ರವಾರ ಸಂಜೆ ಅವರನ್ನು ಕಾರವಾರದ ಕೋವಿಡ್-19 ಆಸ್ಪತ್ರೆಗೆ ಕಳುಹಿಸಿದ್ದಾರೆ. 

ಐದು ರಾಜ್ಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳಿಂದ ಬಂದವರನ್ನು ಸಾಂಸ್ಥಿಕ ಕ್ವಾರೈಂಟೇನ್ ಮಾಡುವ ನಿಯಮವಿಲ್ಲ. ಸರ್ಕಾರದ ಮಾರ್ಗದರ್ಶಿ ಮತ್ತು ನಿಯಮದ ಪ್ರಕಾರ ಆ ಮಹಿಳೆಯನ್ನು ಮನೆಗೆ ಕಳುಹಿಸಲಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್.  ತಿಳಿಸಿದ್ದಾರೆ.

ಮಗ್ದೂಮ್ ಕಾಲೋನಿ ಸೀಲ್ಡೌನ್: ಶುಕ್ರವಾರ ಮಗ್ದೂಮ್ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದ ಸಹಾಯ ಆಯುಕ್ತರು ಸೋಂಕಿತ ಮಹಿಳೆಯ ಮನೆಯಿಂದ ನೂರು ಮೀಟರ್ ವರೆಗಿನ ಪ್ರದೇಶವನ್ನು ಸೀಲ್ಡೌನ್ ಮಾಡಲು ಆದೇಶಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News