ಹಸಿರು ಉಡುಪಿ ಯೋಜನೆಯಡಿ ಗಿಡ ನೆಡುವ ಕಾರ್ಯಕ್ರಮ

Update: 2020-06-05 16:45 GMT

ಉಡುಪಿ, ಜೂ.5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಡುಪಿ ನಗರ ದೆಲ್ಲೆಡೆ ಗಿಡಗಳನ್ನು ಬೆಳೆಸಿ, ಹಸಿರು ಉಡುಪಿ ನಿರ್ಮಾಣ ಉದ್ದೇಶದಿಂದ ಅರಣ್ಯ ಇಲಾಖೆ ವತಿಯಿಂದ ಆರಂಭಿಸಿರುವ ಗಿಡ ನೆಡುವ ಕಾರ್ಯಕ್ರಮಕ್ಕೆ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಹೆದ್ದಾರಿ ಬದಿಯಲ್ಲಿ ಗಿಡಗಳನ್ನು ನೆಡುವುದು ಮಾತ್ರ ವಲ್ಲದೇ ಅವುಗಳನ್ನು ಪಾಲನೆ ಪೋಷಣೆ ಸಹ ಮುಖ್ಯ. ಜಾಗತಿಕ ತಾಪಮಾನ ಹೆಚ್ಚಿರುವ ಈ ಕಾಲದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಸಮಸ್ತ ಜೀವ ಸಂಕುಲಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವುದು ಪ್ರತಿ ಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.

ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಉಡುಪಿ ವಲಯದ ಉಪ ಅರಣ್ಯ ವಲಯಾಧಿಕಾರಿ ಗುರುರಾಜ ಕಾವ್ರಾಡಿ, ಅರಣ್ಯ ರಕ್ಷಕ ದೇವರಾಜ ಪಾಣ ಉಪಸ್ಥಿತರಿದ್ದರು.

ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆಯಿಂದ ಉಡುಪಿಯ ಕಿನ್ನಿಮೂಲ್ಕಿಯಿಂದ ಅಂಬಾಗಿಲುವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ 2800 ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News