ಕೃಷ್ಣಾಪುರ: ಜೂನ್ ಅಂತ್ಯದವರೆಗೆ ಮಸೀದಿಯಲ್ಲಿ ನಮಾಝ್‌ಗೆ ಅವಕಾಶ ಇಲ್ಲ

Update: 2020-06-05 17:21 GMT

ಮಂಗಳೂರು, ಜೂ.5: ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಆರು ಜುಮಾ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಸಹಿತ ಎಲ್ಲ ರೀತಿಯ ಧಾರ್ಮಿಕ ಚಟುವಟಿಕೆಗಳನ್ನು ಜೂನ್ ಅಂತ್ಯದವರೆಗೆ ನಡೆಸದಿರಲು ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ನಿರ್ಧರಿಸಲಾಗಿದೆ.

(ಅಲ್ಹಾಜ್ ಇ.ಕೆ.ಇಬ್ರಾಹೀಂ ಮುಸ್ಲಿಯಾರ್ ಕೃಷ್ಣಾಪುರ)

ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರಕಾರವು ಶುಕ್ರವಾರದ ಜುಮಾ ನಮಾಝ್ ಸಹಿತ ಧಾರ್ಮಿಕ ಚಟುವಟಿಕೆಗೆ ನಿರ್ಬಂಧ ವಿಧಿಸಿತ್ತು. ಇದೀಗ ಜೂ.8ರ ಬಳಿಕ ನಮಾಝ್ ನಿರ್ವಹಿಸಲು ಷರತ್ತುಬದ್ಧ ಅನುಮತಿ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಆದರೆ ಕರಾವಳಿ ತೀರದಲ್ಲಿ ಕೊರೋನ ಸೋಂಕಿನ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೃಷ್ಣಾಪುರ ಮುಸ್ಲಿಂ ಜಮಾಅತ್ ಖಾಝಿ ಅಲ್ಹಾಜ್ ಇ.ಕೆ.ಇಬ್ರಾಹೀಂ ಮುಸ್ಲಿಯಾರ್ ಕೃಷ್ಣಾಪುರ ಅವರ ಮಾರ್ಗದರ್ಶನದ ಮೇರೆಗೆ ಅಧ್ಯಕ್ಷ ಅಲ್ಹಾಜ್ ಬಿ.ಎಂ.ಮಮ್ತಾಝ್ ಅಲಿ ಕೃಷ್ಣಾಪುರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಜೂನ್ ಅಂತ್ಯದವರೆಗೆ ಶುಕ್ರವಾರದ ಜುಮಾ ನಮಾಝ್ ಸಹಿತ ಎಲ್ಲಾ ರೀತಿಯ ನಮಾಝ್ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಸದಿರಲು ನಿರ್ಧರಿಸಲಾಗಿದೆ. ಅಲ್ಲದೆ ಜೂನ್ ಅಂತ್ಯಕ್ಕೆ ಪರಿಸ್ಥಿತಿ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಅಧೀನದಲ್ಲಿ ಕೇಂದ್ರ ಜುಮಾ ಮಸ್ಜಿದ್, ಈದ್ಗಾ ಜುಮಾ ಮಸ್ಜಿದ್, ಬದ್ರುಲ್ ಹುದಾ ಜುಮಾ ಮಸ್ಜಿದ್ 7ನೆ ಬ್ಲಾಕ್, ಮಸ್ಜಿದುತ್ತೈಬಾ ಜುಮಾ ಮಸ್ಜಿದ್ 6ನೆ ಬ್ಲಾಕ್, ಮಸ್ಜಿದುಲ್ ಬದ್ರಿಯಾ 4ನೆ ಬ್ಲಾಕ್, ಮಸ್ಜಿದುಲ್ ಹುದಾ 3ನೆ ಬ್ಲಾಕ್ ಕಾರ್ಯಾಚರಿಸುತ್ತಿದೆ ಎಂದು ಜಮಾಅತ್ ಅಧ್ಯಕ್ಷ ಬಿ.ಎಂ.ಮಮ್ತಾಝ್ ಅಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News