ಸೌದಿ: ಎಕ್ಸ್‌ಪರ್ಟೈಸ್‌ ಕಂಪೆನಿಯ ಅತಂತ್ರ ಉದ್ಯೋಗಿಗಳು ತಾಯ್ನಾಡಿಗೆ

Update: 2020-06-05 18:26 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜೂ.5: ಕೊರೋನ ಲಾಕ್‌ಡೌನ್‌ನಿಂದಾಗಿ ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿದ್ದ ಎಕ್ಸ್‌ಪರ್ಟೈಸ್ ಕಂಪೆನಿಯ ಉದ್ಯೋಗಿಗಳು ತಾಯ್ನಾಡಿಗೆ ವಾಪಸಾಗುತ್ತಿದ್ದಾರೆ. ದಮಾಮ್‌ನ ಕಿಂಗ್ ಫಹ್ದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊತ್ತ ಮೊದಲ ವಿಶೇಷ ಬಾಡಿಗೆ ವಿಮಾನವು 168 ಪ್ರಯಾಣಿಕರನ್ನು ಹೊತ್ತು ಶನಿವಾರ ಬೆಳಗ್ಗೆ ಚೆನ್ನೈಗೆ ತಲುಪಲಿದೆ.

ತಮ್ಮ ಕಂಪೆನಿಯಲ್ಲಿ ಉದ್ಯೋಗಕ್ಕಾಗಿ ಬಂದು ಲಾಕ್‌ಡೌನ್‌ನಿಂದ ಉದ್ಯೋಗವಿಲ್ಲದೆ ಖಾಲಿ ಕುಳಿತವರನ್ನು ಊರಿಗೆ ಕಳುಹಿಸಲು ಹಲವು ಪ್ರತಿಷ್ಠಿತ ಕಂಪೆನಿಗಳು ಮುಂದಾಗಿದ್ದವು. ಈ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ. ಈ ಪೈಕಿ ಎಕ್ಸ್‌ಪರ್ಟೈಸ್ ಕಂಪೆನಿಯ ಅತಂತ್ರ ಉದ್ಯೋಗಿಗಳು ಬಾಡಿಗೆ ವಿಮಾನದಲ್ಲಿ ಪ್ರಯಾಣ ಆರಂಭಿಸಿದ್ದಾರೆ.

ಈ ಕುರಿತು ‘ವಾರ್ತಾಭಾರತಿ’ ಜೊತೆ ಮಾಹಿತಿ ಹಂಚಿಕೊಂಡಿರುವ ಎಕ್ಸ್‌ಪರ್ಟೈಸ್ ಕಂಟ್ರಾಕ್ಟಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಕೆ.ಎಸ್. ಶೇಖ್ ಕರ್ನಿರೆ, ‘‘ಮೊತ್ತ ಮೊದಲ ಬಾಡಿಗೆ ವಿಮಾನದಲ್ಲಿ ಎಕ್ಸ್‌ಪರ್ಟೈಸ್ ಕಂಪೆನಿ ಕಳುಹಿಸಿದ 168 ಪ್ರಯಾಣಿಕರಿದ್ದಾರೆ. ಇನ್ನುಳಿದ ಉದ್ಯೋಗಿಗಳು ಮುಂದಿನ ವಿಮಾನಗಳಲ್ಲಿ ಆಗಮಿಸಲಿದ್ದಾರೆ’’ ಎಂದು ತಿಳಿಸಿದ್ದಾರೆ.

‘‘ದಮಾಮ್‌ನಿಂದ ಒಂಬತ್ತು ವಿಮಾನಗಳು ಅತಂತ್ರ ಉದ್ಯೋಗಿಗಳನ್ನು ಸ್ವದೇಶಕ್ಕೆ ಹೊತ್ತು ತರಲಿವೆ. ಮಂಗಳೂರು, ಚೆನ್ನೈ, ದೆಹಲಿಗೆ ತಲಾ ಎರಡು ಬಾಡಿಗೆ ವಿಮಾನ, ಅಹ್ಮದಾಬಾದ್ (ಗುಜರಾತ್), ಕೊಚ್ಚಿ, ಹೈದರಾಬಾದ್‌ಗೆ ತಲಾ ಒಂದೊಂದು ಬಾಡಿಗೆ ವಿಮಾನಗಳು ಮುಂದಿನ ದಿನಗಳಲ್ಲಿ ಪ್ರಯಾಣ ಬೆಳೆಸಲಿವೆ. ಒಂಬತ್ತು ಬಾಡಿಗೆ ವಿಮಾನಗಳ ಪೈಕಿ ದಮಾಮ್‌ನಿಂದ ಚೆನ್ನೈಗೆ ಈಗಾಗಲೇ ವಿಮಾನವೊಂದು ಪ್ರಯಾಣ ಬೆಳೆಸಿದೆ. ಇನ್ನುಳಿದ ಪ್ರಯಾಣಿಕರು ದಮಾಮ್‌ನಿಂದ ತೆರಳಲು ಸರ್ವ ಸಿದ್ಧತೆ ಕೈಗೊಂಡಿದ್ದಾರೆ. ಇದರಲ್ಲಿ ಹಿರಿಯ-ವಯಸ್ಕರು ಹಾಗೂ ಗರ್ಭಿಣಿಯರಿಗೆ ಆದ್ಯತೆ ನೀಡಲಾಗಿದೆ’’ ಎಂದು ಶೇಖ್ ಕರ್ನಿರೆ ಮಾಹಿತಿ ನೀಡಿದರು.

ಮಂಗಳೂರಿನ ಇನ್ನೋರ್ವ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಝಕರಿಯ ಬಜ್ಪೆ ಅವರ ಅಲ್ ಮುಝೈನ್ ಕಂಪೆನಿಗೂ ಮಂಗಳೂರಿಗೆ ಮೂರು ಬಾಡಿಗೆ ವಿಮಾನಗಳನ್ನು ಕಳಿಸುವ ಅನುಮತಿ ಸಿಕ್ಕಿತ್ತು. ಈ ಪೈಕಿ 169 ಪ್ರಯಾಣಿಕರನ್ನು ಹೊತ್ತ ಬಾಡಿಗೆ ವಿಮಾನವೊಂದು ಜೂ.2ರಂದು ರಾತ್ರಿ ಮಂಗಳೂರಿಗೆ ಆಗಮಿಸಿತ್ತು. ಶೀಘ್ರದಲ್ಲೇ ಅಲ್ ಮುಝೈನ್ ಕಂಪೆನಿಯ ಉದ್ಯೋಗಿಗಳು ಇನ್ನು ಎರಡು ಬಾಡಿಗೆ ವಿಮಾನಗಳಲ್ಲಿ ತಾಯ್ನಾಡಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News