ಪೇಸ್‌ಗೆ 100 ಗ್ರಾನ್‌ಸ್ಲಾಮ್ ನಲ್ಲಿ ಆಡುವ ಬಯಕೆ

Update: 2020-06-05 18:12 GMT

ಹೊಸದಿಲ್ಲಿ, ಜೂ.5: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ 100 ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಕಾಣಿಸಿಕೊಳ್ಳಲು ಇನ್ನು ಮೂರು ಹೆಜ್ಜೆಯಿಂದ ಹಿಂದಿದ್ದಾರೆ. ಕೋವಿಡ್-19ರಿಂದಾಗಿ ಅನಿಶ್ಚಿತತೆ ಇರುವ ಕಾರಣ 100ನೇ ಗ್ರಾನ್‌ಸ್ಲಾಮ್ ಆಡುವುದರೊಂದಿಗೆ ಮೈಲುಗಲ್ಲು ತಲುಪುವ ಹಾಗೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಸಿಗುವ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.

ವೃತ್ತಿಪರ ಆಟಗಾರನಾಗಿ 2020 ನನ್ನ ಕೊನೆಯ ವರ್ಷವಾಗಿದೆ ಎಂದು ಪೇಸ್ ಹೇಳಿದ್ದರು.ದಾಖಲೆ 8ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ವಿದಾಯ ಹೇಳುವ ಪೇಸ್ ಯೋಜನೆ ಕೋವಿಡ್-19ರಿಂದಾಗಿ ತಲೆಕೆಳಗಾಗಿದೆ. ‘‘ಒಲಿಂಪಿಕ್ಸ್ ಇನ್ನೂ ಸಾಕಷ್ಟು ದೂರದಲ್ಲಿದೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಕ್ರೀಡೆಗಳು ಆರಂಭವಾಗುತ್ತದೆ ಎಂದು ಈಗಲೇ ಹೇಳಲು ಕಷ್ಟವಾಗುತ್ತದೆ. ಇದು ಅಕ್ಟೋಬರ್ ಅಥವಾ ನವೆಂಬರ್‌ನಲ್ಲೂ ಆರಂಭವಾಗಬಹುದು. ಯಾವಾಗ ಆರಂಭವಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ನನ್ನ ತಂಡ ಹಾಗೂ ನಾನು ಉತ್ತಮವಾಗಿ ತಯಾರಾಗಿದ್ದು, ಲಾಕ್‌ಡೌನ್ ಓಪನ್ ಆದ ಬಳಿಕ 2021ರ ಋತುವಿನ ಕುರಿತು ಯೋಚಿಸುವೆ’’ಎಂದು ಪೇಸ್ ಹೇಳಿದರು.

‘‘ನಾನು ಈ ತನಕ 97 ಗ್ರಾನ್‌ಸ್ಲಾಮ್‌ಗಳಲ್ಲಿ ಆಡಿದ್ದೇನೆ. ಇನ್ನು ಮೂರರಲ್ಲಿ ಆಡಿದರೆ 100ಗ್ರಾನ್ ಸ್ಲಾಮ್‌ಗಳಲ್ಲಿ ಆಡಿದಂತಾಗುತ್ತದೆ. ಎಂಟನೇ ಬಾರಿ ಒಲಿಂಪಿಕ್ಸ್ ನಲ್ಲಿ ಆಡುವ ಅವಕಾಶ ಲಭಿಸಿದರೆ ಟೆನಿಸ್ ಆಟಗಾರನಾಗಿ ಹೆಚ್ಚು ಒಲಿಂಪಿಕ್ಸ್‌ನಲ್ಲಿ ಆಡಿದ ಹೆಗ್ಗಳಿಕೆೆ ಲಭಿಸಲಿದೆ. ನಾನು ಈ ತನಕ ವೃತ್ತಿಜೀವನದಲ್ಲಿ ಮಾಡಿರುವ ಸಾಧನೆಯಿಂದ ತೃಪ್ತನಾಗಿದ್ದೇನೆ’’ಎಂದು 18 ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತರಾಗಿರುವಪೇಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News