ವಿಶ್ವಕಪ್‌ಗಾಗಿ 3ನೇ ಕ್ರೀಡಾಂಗಣ ಪೂರ್ಣಗೊಳಿಸಿದ ಖತರ್

Update: 2020-06-05 18:22 GMT

ದೋಹಾ, ಜೂ.5: 2022ರ ಫಿಫಾ ವಿಶ್ವಕಪ್‌ಗಾಗಿ ಮೂರನೇ ಕ್ರೀಡಾಂಗಣವನ್ನು ಪೂರ್ಣಗೊಳಿಸಿರುವುದಾಗಿ ಖತರ್ ಪ್ರಕಟಿಸಿದೆ.

ಎಜುಕೇಶನ್ ಸಿಟಿ ಸ್ಟೇಡಿಯಂ ಡಿಸೆಂಬರ್ 18ರಂದು ಕ್ಲಬ್ ವಿಶ್ವಕಪ್‌ನ ಸೆಮಿಫೈನಲ್ ಆತಿಥ್ಯವಹಿಸಬೇಕಾಗಿತ್ತು. ಆದರೆ, ಪ್ರಮಾಣೀಕರಣಕ್ಕೆ ವಿಳಂಬ ವಾಗುತ್ತಿರುವ ಕಾರಣ ಸ್ಟೇಡಿಯಂನ ಉದ್ಘಾಟನೆಯನ್ನು ಮುಂದೂಡಲಾಗಿದೆ.

ವಿತರಣೆ ಹಾಗೂ ಪರಂಪರೆಯ ಸುಪ್ರೀಂ ಸಮಿತಿ ಹಾಗೂ ಖತರ್ ಫೌಂಡೇಶನ್, ಎಜುಕೇಶನ್ ಸಿಟಿಯಲ್ಲಿರುವ ಮೂರನೇ ಕ್ರೀಡಾಂಗಣವನ್ನು 2022ರ ಫಿಫಾ ವಿಶ್ವಕಪ್‌ಗಾಗಿ ಪೂರ್ಣಗೊಳಿಸಿದ್ದಾಗಿ ಪ್ರಕಟಿಸಿದೆ ಎಂದು ಸರಕಾರಿ ಸ್ವಾಮ್ಯದ ಖತರ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಎಜುಕೇಶನ್ ಸಿಟಿ ಕ್ರೀಡಾಂಗಣ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ತನಕದ ಪಂದ್ಯಗಳನ್ನು ಆಯೋಜಿಸಲಿದೆ. ಟೂರ್ನಮೆಂಟ್‌ನ ಬಳಿಕ 40,000 ಆಸನಗಳ ಪೈಕಿ ಅರ್ಧದಷ್ಟನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಸ್ಟೇಡಿಯಂಗಳ ನಿರ್ಮಾಣಕ್ಕಾಗಿ ದಾನ ನೀಡಲಾಗುತ್ತದೆ.

ವಿಶ್ವಕಪ್ ಪ್ರಾರಂಭವಾಗಲು ಎರಡೂವರೆ ವರ್ಷಗಳ ಮೊದಲೇ ಖತರ್ 40,000 ಆಸನಗಳ ಸಾಮರ್ಥ್ಯದ ಹೊಚ್ಚ ಹೊಸ ಅಲ್-ಜನೌಬ್ ಸ್ಟೇಡಿಯಂ ಹಾಗೂ ನವೀಕರಿಸಿದ ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನ್ನು ಆರಂಭಿಸಿದೆ. ಐದು ನೂತನ ಕ್ರೀಡಾಂಗಣಗಳು ನಿರ್ಮಾಣದ ಹಂತದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News