ಭಾರತಕ್ಕೆ 2022ರ ಎಎಫ್‌ಸಿ ಮಹಿಳಾ ಏಶ್ಯನ್ ಕಪ್ ಆತಿಥ್ಯದ ಹಕ್ಕು

Update: 2020-06-05 18:25 GMT

ಹೊಸದಿಲ್ಲಿ, ಜೂ.5: ಭಾರತಕ್ಕೆ 1979ರ ಬಳಿಕ ಮೊದಲ ಬಾರಿ ಎಎಫ್‌ಸಿ ಮಹಿಳಾ ಏಶ್ಯನ್ ಕಪ್ 2022ರ ಆತಿಥ್ಯದ ಹಕ್ಕುಗಳನ್ನು ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್ ನೀಡಿದೆ.

ಫೆಬ್ರವರಿಯಲ್ಲಿ ನಡೆದಿದ್ದ ಎಎಫ್‌ಸಿ ಮಹಿಳಾ ಫುಟ್ಬಾಲ್ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಎಫ್‌ಸಿ ಮಹಿಳಾ ಫುಟ್ಬಾಲ್ ಸಮಿತಿಯು ಭಾರತಕ್ಕೆ ಟೂರ್ನಿಯ ಆತಿಥ್ಯವಹಿಸಲು ಶಿಫಾರಸು ಮಾಡಿದೆ.

ಅಖಿಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ(ಎಐಎಫ್‌ಎಫ್) ಎಎಫ್‌ಸಿ ಪ್ರಧಾನ ಕಾರ್ಯದರ್ಶಿ ಡಾಟೊ ವಿಂಡ್ಸನ್ ಬರೆದ ಪತ್ರದಲ್ಲಿ,‘‘ಸಮಿತಿಯು ಎಎಫ್‌ಸಿ ಮಹಿಳಾ ಏಶ್ಯಕಪ್ 2022ರ ಫೈನಲ್ಸ್ ಆತಿಥ್ಯದ ಹಕ್ಕುಗಳನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ಗೆ ನೀಡಿದೆ’’ ಎಂದು ಬರೆದಿದ್ದಾರೆ.

ಟೂರ್ನಮೆಂಟ್ ವರ್ಷದ ದ್ವಿತೀಯಾರ್ಧದಲ್ಲಿ ನಡೆಯುವ ಸಾಧ್ಯತೆಯಿದೆ. 1979ರ ಆವೃತ್ತಿಯ ಏಶ್ಯಕಪ್‌ನಲ್ಲಿ ಭಾರತ ರನ್ನರ್ಸ್‌ಅಪ್ ಆಗಿತ್ತು.

‘‘2022ರಲ್ಲಿ ಎಎಫ್‌ಸಿ ಮಹಿಳಾ ಏಶ್ಯಕಪ್‌ಗೆ ಆತಿಥ್ಯವ ಹಿಸಲು ನಮ್ಮನ್ನು ಸೂಕ್ತ ಎಂದು ಕಂಡುಕೊಂಡ ಏಶ್ಯನ್ ಫುಟ್ಬಾಲ್ ಒಕ್ಕೂಟಕ್ಕೆ ನಾನು ಧನ್ಯವಾದ ಹೇಳುವ ಅಗತ್ಯವಿದೆ. ಪಂದ್ಯಾವಳಿಯು ಮಹತ್ವಾಕಾಂಕ್ಷಿ ಮಹಿಳಾ ಆಟಗಾರರನ್ನು ಸಜ್ಜುಗೊಳಿಸುತ್ತದೆ. ದೇಶದ ಮಹಿಳೆಯರ ಫುಟ್ಬಾಲ್‌ಗೆ ಸಂಬಂಧಿಸಿದಂತೆ ಸಮಗ್ರ ಸಾಮಾಜಿಕ ಕ್ರಾಂತಿಯನ್ನು ತರುತ್ತದೆ’’ಎಂದು ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ. 2022ರ ಟೂರ್ನಮೆಂಟ್‌ನಲ್ಲಿ 12 ತಂಡಗಳು ಭಾಗವಹಿಸುತ್ತವೆ. ಈ ಮೊದಲು 8 ತಂಡಗಳಿಗೆ ಭಾಗವಹಿಸಲು ಅವಕಾಶವಿತ್ತು. ಆತಿಥೇಯ ರಾಷ್ಟ್ರವಾಗಿ ಭಾರತ ನೇರವಾಗಿ ಟೂರ್ನಿಗೆ ಅರ್ಹತೆ ಪಡೆಯಲಿದೆ. ಈ ಟೂರ್ನಿಯು 2023ರ ಫಿಫಾ ಮಹಿಳೆಯರ ವಿಶ್ವಕಪ್‌ಗೆ ಅಂತಿಮ ಅರ್ಹತಾ ಟೂರ್ನಮೆಂಟ್ ಆಗಿ ಪರಿಗಣಿಸಲ್ಪಟ್ಟಿದೆ.

ಮುಂದಿನ ವರ್ಷ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ನ ಆತಿಥ್ಯವಹಿಸಲಿರುವ ಭಾರತಕ್ಕೆ ಏಶ್ಯನ್ ಕಪ್ ಟೂರ್ನಿಯ ಆತಿಥ್ಯದ ಹಕ್ಕು ಲಭಿಸಿರುವುದು ಭಾರೀ ಉತ್ತೇಜನ ನೀಡಿದೆ. ಭಾರತ 2016ರಲ್ಲಿ ಎಎಫ್‌ಸಿ ಅಂಡರ್-16 ಚಾಂಪಿಯನ್‌ಶಿಪ್ ಹಾಗೂ 2017ರ ಫಿಫಾ ಅಂಡರ್-17 ವಿಶ್ವಕಪ್‌ನ ಆಯೋಜನೆಯನ್ನ್ನು ಯಶಸ್ವಿಯಾಗಿ ನಡೆಸಿತ್ತು.

‘‘ಭಾರತದಲ್ಲಿ ಮಹಿಳಾ ಫುಟ್ಬಾಲ್ ಇನ್ನಷ್ಟು ಜನಪ್ರಿಯತೆ ಗಳಿಸುವಲ್ಲಿ ಟೂರ್ನಮೆಂಟ್ ಪ್ರಮುಖ ಪಾತ್ರವಹಿಸಲಿದೆ. 2021ರ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಬೆನ್ನಿಗೇ ಮಹಿಳಾ ಏಶ್ಯಕಪ್ 2022 ಬರುತ್ತಿದೆ. ಇದು ನಮಗೆ ಆತಿಥ್ಯದ ಹಕ್ಕನ್ನು ಉಳಿಸಿಕೊಳ್ಳಲು ಹಾಗೂ ವೇಗವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ’’ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News