ಜೂ.8ರಿಂದ ಮಸೀದಿಗಳನ್ನು ತೆರೆಯಲು ಅವಕಾಶ: ಸುರಕ್ಷಾ ಕ್ರಮಗಳನ್ನು ಪಾಲಿಸಲು ಎಸ್ಕೆಎಸ್ಎಮ್ಎಫ್ ಸೂಚನೆ

Update: 2020-06-06 05:47 GMT

ಮಂಗಳೂರು, ಜೂ.6: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಧಾರ್ಮಿಕ ಕೇಂದ್ರಗಳನ್ನು ತಾತ್ಕಾಲಿಕ ನಿರ್ಬಂಧಿಸಿ ಆದೇಶಿಸಿದ್ದ ಕೇಂದ್ರ ಮತ್ತು ರಾಜ್ಯ ಸರಕಾರ ಜೂ.8ರಿಂದ ಮತ್ತೆ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ಜೂನ್ 8ರಿಂದಲೇ ಮಸೀದಿಗಳನ್ನು ತೆರೆಯಲು ಸಮಸ್ತ ಕೇರಳ‌‌ ಸುನ್ನಿ‌ ಮಹಲ್ ಫೆಡರೇಶನ್ (SKSMF) ತೀರ್ಮಾನಿಸಿದೆ.

ಈ ಸಂಬಂಧ ಸಮಸ್ತ ಕೇರಳ‌‌ ಸುನ್ನಿ‌ ಮಹಲ್ ಫೆಡರೇಶನ್ ರಾಜ್ಯ ಸಮಿತಿಯು ಎಲ್ಲಾ ಜಿಲ್ಲಾ ಸಮಿತಿಗಳಿಗೆ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಬೇಕಾದ ಸುರಕ್ಷಾ ಕಾರ್ಯಗಳನ್ನು ಪಟ್ಟಿ ಮಾಡಿ, ಪಾಲಿಸುವಂತೆ ಆದೇಶಿಸಿದೆ.

2020 ಜೂ.8ರ ನಂತರ ಮಸೀದಿಗಳನ್ನು ತೆರೆಯಲು ಸರಕಾರ ತೀರ್ಮಾನ ಕೈಗೊಂಡದ್ದು ಸ್ವಾಗತಾರ್ಹ. ಆದರೆ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಬೇಕಾದ ಸುರಕ್ಷಾ ಕಾರ್ಯಗಳನ್ನು ಪಾಲಿಸುವುದು ಪ್ರತಿ ಮೊಹಲ್ಲಾ ಕಮಿಟಿಯ ಪ್ರತ್ಯೇಕ ಜವಾಬ್ದಾರಿ ಆಗಿರುತ್ತದೆ. ಈ ವಿಷಯದಲ್ಲಿ ಮೊಹಲ್ಲಾ ಕಮಿಟಿಯು ಕೆಳಗೆ ಕೊಟ್ಟಿರುವ ನಿರ್ದೇಶನಗಳನ್ನು ಪಾಲಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುನ್ನಿ‌ ಮಹಲ್ ಫೆಡರೇಶನ್ ಸೂಚನೆ ನೀಡಿದೆ.

ಪಾಲಿಸಬೇಕಾದ ಸುರಕ್ಷಾ ಕ್ರಮಗಳು

1. ಸರಕಾರದ ಆದೇಶಗಳನ್ನು ಸಂಪೂರ್ಣ ವಾಗಿ ಪಾಲಿಸುವುದರ ಬಗ್ಗೆ ಖಾತರಿ ಪಡಿಸುವುದು.

2. ಮಸೀದಿಗೆ ಪ್ರವೇಶಿಸುವವರಿಗೆ ಮತ್ತು ಹೊರಹೋಗುವವರಿಗೆ ಸೋಪ್ ಉಪಯೋಗಿಸಿ ಕೈಗಳನ್ನು ರೋಗಾಣು ಮುಕ್ತವಾಗಿಸಲು ವ್ಯವಸ್ಥೆ ಮಾಡುವುದು.

3. ಅಂಗಶುದ್ದಿಯನ್ನು ಮನೆಯಿಂದಲೇ ಮಾಡಲು ನಿರ್ದೇಶನ ನೀಡಬೇಕು. ಮಸೀದಿಯ ಹೌಳ್ (ಅಂಗಸ್ನಾನ ಮಾಡುವ ಸ್ಥಳ)ಗಳ ಬದಲು ನಳ್ಳಿಗಳನ್ನು ಮಾತ್ರ ಉಪಯೋಗ ಮಾಡಬೇಕು.

4. ಸಾಮಾನ್ಯ ಮುಸಲ್ಲ(ಚಾಪೆ) ಗಳ ಹೊರತು ಐದು ಹೊತ್ತು ನಮಾಝ್ ಮಾಡಿ ತೊಳೆದು ಒಣಗಿಸುವ ರೀತಿಯ ಮುಸಲ್ಲಗಳನ್ನು ಬಳಸಬೇಕು. (ಭಾರ ಕಮ್ಮಿ ಇರುವ ದೊಡ್ಡ ಟವಲ್ ತರದ ಬಟ್ಟೆ)

5. ರೋಗಿಗಳು, ವೃದ್ಧರು, ಮಕ್ಕಳು, ರೋಗ ಪ್ರತಿರೋಧ ಶಕ್ತಿ ಕಡಿಮೆ ಇರುವವರು ಅಲ್ಲದ ಪರಿಚಿತ ಮೊಹಲ್ಲಾ ನಿವಾಸಿಗಳಿಗೆ ಮಾತ್ರ ಮಸೀದಿಯೊಳಗೆ ಪ್ರವೇಶ ನೀಡುವುದು.

6. ಅಪರಿಚಿತರು, ಯಾತ್ರಿಕರು ಮುಂತಾದವರು ಅನಿವಾರ್ಯವಾಗಿ ಬಂದರೆ ಮಸೀದಿಯ ಹೊರಗಿನ ಚಾವಡಿಯಲ್ಲಿ ನಮಾಝ್ ಗೆ ವ್ಯವಸ್ಥೆ ಮಾಡುವುದು.

7. ಕಾರ್ಪೆಟ್ ಹಾಳಾಗದಂತೆ ಮುಂದೆ ಉಪಯೋಗಿಸುವ ರೀತಿಯಲ್ಲಿ ಜೋಪಾನವಾಗಿ ಇಡುವುದು.

8. ಬಾಂಗ್ ಗೆ ಐದು ನಿಮಿಷಗಳ ಮೊದಲು ಮಸೀದಿಯನ್ನು ತೆರೆಯುವುದು, ಜಮಾಅತನ್ನು ಹದಿನೈದು ನಿಮಿಷಗಳ ಒಳಗೆ ಮತ್ತು ಜುಮಾ ನಮಾಝ್ ಇಪ್ಪತ್ತು ನಿಮಿಷಗಳ ಒಳಗೆ ನಿರ್ವಹಿಸಿ ಇತರ ಸಮಯದಲ್ಲಿ ಮಸೀದಿಯನ್ನು ಬಂದ್ ಮಾಡುವುದು.

9. ಅತಿಯಾಗಿ ಜನ ಸೇರುವ ಸ್ಥಳಗಳಲ್ಲಿ ಒಬ್ಬರಿಗೆ ಒಂದೋ ಎರಡೋ ವಖ್ತ್ ಗಳಿಗೆ ಮಾತ್ರ ಭಾಗವಹಿಸುವ ರೀತಿಯಲ್ಲಿ ಐದು ವಖ್ತಿಗೆ ಭಾಗವಹಿಸುವವರ ಪಟ್ಟಿ ಮಹಲ್ ಕಮಿಟಿ ಸಿದ್ದಪಡಿಸಿ ಸಾಮನ್ಯವಾಗಿ ಸೇರುತ್ತಿದ್ದವರಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News