ಮುಲ್ಕಿಯಲ್ಲಿ ಉದ್ಯಮಿಯ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2020-06-07 06:05 GMT

ಮುಲ್ಕಿ, ಜೂ.6: ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಉದ್ಯಮಿಯೋರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಸ್ತು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಾರ್ನಾಡ್ ಬಪ್ಪನಾಡಿನ ಮುಹಮ್ಮದ್ ಹಾಸಿಮ್ (27), ಮುಹಮ್ಮದ್ ರಾಝಿಂ(24) ಮತ್ತು ನಿಸಾರ್ ಯಾನೆ ರಿಯಾಝ್(33), ಉಚ್ಚಿಲ ಬಡಾ ಗ್ರಾಮದ ಅಬೂಬಕರ್ ಸಿದ್ದೀಕ್ (27) ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣದ ದಾಖಲಾಗಿತ್ತು. ಅದರಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ಪೊಲೀಸರು ಮತ್ತು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಘಟನೆಯ ಗಾಯಾಳುಗಳು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿದ್ದಾರೆ. ಈ ಹಿಂದಿನ ಹಳೇ ದ್ವೇಷದಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆ ಹಿನ್ನೆಲೆ: ಮುಲ್ಕಿ ಬಸ್ ನಿಲ್ದಾಣದ ವಿಜಯ ಸನ್ನಿಧಿ ಬಳಿಯ ಬ್ಯಾಂಕೊಂದರ ಎದುರುಗಡೆ ಶುಕ್ರವಾರ ಸಂಜೆ ಘಟನೆ ನಡೆದಿತ್ತು. ಘಟನೆಯಲ್ಲಿ ಪುತ್ತೂರು ತಾಲೂಕು ಮುರುಳ್ಯ ನಿವಾಸಿ, ಸದ್ಯ ಮೂಡುಬಿದಿರೆಯಲ್ಲಿ ವಾಸ್ತವ್ಯವಿದ್ದ ಉದ್ಯಮಿ ಅಬ್ದುಲ್ಲತೀಫ್ (36) ಕೊಲೆಯಾಗಿದ್ದರು. ಹೊಡೆದಾಟದಲ್ಲಿ ಗಂಭೀರ ಗಾಯಗೊಂಡಿದ್ದ ಮುಲ್ಕಿ ಕಾರ್ನಾಡು ದರ್ಗಾ ರಸ್ತೆಯ ಬಳಿಯ ನಿವಾಸಿಗಳಾದ ಮುನೀರ್, ಇಯಾಝ್, ಇಮ್ರಾನ್ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದ್ಯಮಿ ಮುನೀರ್ ಕಾರ್ನಾಡ್ ತಮ್ಮ ಮಗ ಇಯಾಝ್ ಹಾಗೂ ಅಳಿಯ ಅಬ್ದುಲ್ಲತೀಫ್ ಮತ್ತಿರರರೊಂದಿಗೆ ಮುಲ್ಕಿಯ ಬ್ಯಾಂಕಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ಬೈಕ್ ಮತ್ತು ಕಾರಿನಲ್ಲಿ ಬಂದಿದ್ದ ಸುಮಾರು 6-7 ಮಂದಿ ದುಷ್ಕರ್ಮಿಗಳು ಮುನೀರ್ ಮತ್ತಿತರರ ಮೇಲೆ ಸೋಡಾ ಬಾಟಲಿ, ಮರದ ತುಂಡು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಮುನೀರ್, ಇಯಾಝ್, ಇಮ್ರಾನ್ ಅವರನ್ನು ಖಾಸಗಿ ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಂಭೀರ ಗಾಯಗೊಂಡಿದ್ದ ಅಬ್ದುಲ್ಲತೀಫ್ ದಾರಿಮಧ್ಯೆ ಮೃತಪಟ್ಟಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News