ಕ್ವಾರಂಟೈನ್ ನಲ್ಲಿರುವವರ ಮಾಹಿತಿಗೆ ಆ್ಯಪ್ ಅಭಿವೃದ್ಧಿ: ದ.ಕ. ಜಿಲ್ಲಾಧಿಕಾರಿ

Update: 2020-06-06 11:48 GMT

ಬಂಟ್ವಾಳ, ಜೂ. 6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಸಂಗ್ರಹಣೆಗಾಗಿ ಕ್ವಾರಂಟೈನ್ ವಾಚ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಅದರ ಮೂಲಕ ಅವರು ಮನೆಯಲ್ಲೇ ಇರುವ ಕುರಿತು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ. 

ಶನಿವಾರ ಬಂಟ್ವಾಳ ತಾಲೂಕಿನ ಕ್ವಾರಂಟೈನ್‌ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಮಾಧ್ಯಮದವರ ಜತೆ ಮಾತನಾಡಿದರು. 

ಪ್ರತಿ ಗ್ರಾಮ, ವಾರ್ಡ್ ಕ್ವಾರಂಟೈನ್ ವಾಚ್‌ನ್ನು ವಿಭಾಗಿಸಲಾಗಿದ್ದು ಅಧಿಕಾರಿಗಳು ಕ್ವಾರಂಟೈನ್‌ನಲ್ಲಿರುವವರ ಮನೆಗೆ ಭೇಟಿ ನೀಡಿ ಪೋಟೊ ತೆಗೆದು ಮಾಹಿತಿ ಸಂಗ್ರಹಿಸಲಿದ್ದಾರೆ. ಅವರ ಮನೆ ಮುಂದೆ ಸೀಲ್ ಹಾಗೂ ಕೈಗೆ ಸೀಲ್ ಹಾಕಿರುತ್ತೇವೆ. ಮಹಾರಾಷ್ಟ್ರ ಹಾಗೂ ವಿದೇಶದಿಂದ ಬಂದವರಿಗೆ 7 ದಿನಗಳ ಹಾಸ್ಟೆಲ್, ಹೊಟೇಲ್ ಕ್ವಾರಂಟೈನ್, 14 ದಿನಗಳ ಹೋಂ ಕ್ವಾರಂಟೈನ್, ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಇರುತ್ತದೆ ಎಂದರು. 

ಸಿಕ್ಯುಎಎಸ್ ಸಿಸ್ಟಂ ಮೂಲಕ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲಾಗುತ್ತದೆ. ವಿಮಾನ, ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ತಾಲೂಕಿನಲ್ಲಿ 60 ವರ್ಷ ಮೇಲ್ಪಟ್ಟವರ ಮಾಹಿತಿ ಸಂಗ್ರಹಿಸುವ ಹೆಲ್ತ್ ವಾಚ್ ಸರ್ವೇ ಕಾರ್ಯ 90 ಶೇ.ಪೂರ್ಣಗೊಂಡಿದೆ ಎಂದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ., ಎಸಿ ಮದನ್‌ಮೋಹನ್ ಸಿ., ತಹಶೀಲ್ದಾರ್ ರಶ್ಮಿ ಎಸ್.ಆರ್., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News