ಮಕ್ಕಳಿಗೆ ಭೀತಿಯಿಲ್ಲದಂತೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿ: ಶಾಸಕ ಸಂಜೀವ ಮಠಂದೂರು

Update: 2020-06-06 11:55 GMT

ಪುತ್ತೂರು: ಕೊರೊನಾದಿಂದ ಜಗತ್ತು ಸ್ತಬ್ದವಾಗಿದ್ದು, ಡಬ್ಲ್ಯುಎಚ್‍ಒ ಮಾರ್ಗಸೂಚಿಯ ಪಾಲನೆಯಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಇದೇ ಮಾರ್ಗಸೂಚಿ ಅನುಸರಣೆಯೊಂದಿಗೆ ಮಕ್ಕಳಿಗೆ ಯಾವುದೇ ಭೀತಿ ಇಲ್ಲದಂತೆ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ನಡೆಯಲಿ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು. 

ಅವರು ಶನಿವಾರ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ದ ಸಹಯೋಗದಲ್ಲಿ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಸಂತ ವಿಕ್ಟರ್ಸ್ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷಾ ತಯಾರಿಯ ತಾಲೂಕು ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. 

ಪರೀಕ್ಷಾ ಸಮಯದಲ್ಲಿ ನಮಗೆ ಹಲವು ಸವಾಲುಗಳು ಎದುರಾಗಲಿದೆ. ಫಲಿತಾಂಶ ಪಡೆಯುವುದರ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯೂ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ನಿರ್ಭೀತಿಯಿಂದ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಹಾಗೂ ಪರೀಕ್ಷೆ ಮುಗಿಸಿ ನಿರ್ಗಮಿಸಲು ಸಮರ್ಪಕ ವ್ಯವಸ್ಥೆಗಳಾಗಬೇಕು. ಮಕ್ಕಳ ಭವಿಷ್ಯದ ದೃಷ್ಠಿಯಲ್ಲಿ ಮುಂಜಾಗೃತಾ ಕೃಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು. 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಯ್ದೇ ದೇವುಸ್ ಚರ್ಚ್‍ನ ಧರ್ಮಗುರು ಫಾ. ಆಲ್ಫ್ರೆಡ್ ಜೆ ಪಿಂಟೋ, ಡಿಡಿಪಿಐ ಮಲ್ಲೇಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಶಿಕ್ಷಣ ಸಮನ್ವಯಾಧಿಕಾರಿ ಮೋನಪ್ಪ, ಶಿಕ್ಷಕರ ಸಂಘದ ಅಧ್ಯಕ್ಷರಾದ ಅಬ್ರಹಾಂ, ದಿವಾಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಮತ್ತು ಎಸೆಸೆಲ್ಸಿ ಪರೀಕ್ಷಾ ನೋಡೆಲ್ ಅಧಿಕಾರಿ ಜಯರಾಮ ಶೆಟ್ಟಿ ಪರೀಕ್ಷಾ ತಯಾರಿಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯ ಸುಂದರ ಗೌಡ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News