ಉಡುಪಿ: ಸೋಮವಾರದಿಂದ ಜಿಲ್ಲೆಯ ಎಲ್ಲಾ ದೇವಾಲಯಗಳು ಓಪನ್

Update: 2020-06-06 12:48 GMT

ಉಡುಪಿ, ಜೂ.6: ಕೇಂದ್ರ ಸರಕಾರದ ಆದೇಶದಂತೆ ರಾಜ್ಯ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳು ಸೇರಿದಂತೆ ಉಡುಪಿ ಜಿಲ್ಲೆಯ ಎಲ್ಲಾ ದೇವಾಲಯಗಳನ್ನು ಜೂ.8 ಸೋಮವಾರದಿಂದ ಭಕ್ತರ ದರ್ಶನಕ್ಕೆ ತೆರೆಯಲು ಅವಕಾಶ ನೀಡಲಾಗಿದೆ.

ಆದರೆ ಇದಕ್ಕಾಗಿ ಕೋವಿಡ್-19 (ಕೊರೋನ ವೈರಸ್) ಹರಡುವುದನ್ನು ತಡೆಯುವುದಕ್ಕಾಗಿ ವಿಧಿಸಲಾಗಿರುವ ಮುಂಜಾಗ್ರತಾ ಕ್ರಮಗಳನ್ನು ಭಕ್ತರು ಹಾಗೂ ಎಲ್ಲಾ ಸಾರ್ವಜನಿಕರು ಕಟ್ಟುನಿಟ್ಟಾಗಿ ಹಾಗೂ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಸರಕಾರ ವಿಧಿಸಿರುವ ಮಾರ್ಗಸೂಚಿ ಹೀಗಿದೆ.

►ದೇವಸ್ಥಾನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ (ಮುಖಗವಸು) ಧರಿಸಿರಬೇಕು. ಮಾಸ್ಕ್ ಇಲ್ಲದಿರುವವರಿಗೆ ದೇವಸ್ಥಾನದ ಪ್ರವೇಶಕ್ಕೆ ಅವಕಾಶವಿಲ್ಲ. ಥರ್ಮಲ್ ಸ್ಕಾನಿಂಗ್ ಪರೀಕ್ಷೆಗೂ ಒಳಪಡಬೇಕು ಹಾಗೂ ಸ್ಯಾನಿಟೈಸರ್‌ಗಳನ್ನು ಬಳಸಬೇಕು.
►ದೇವಸ್ಥಾನದ ಎದುರು ಅಳವಡಿಸಿರುವ ನಲ್ಲಿಯಲ್ಲಿ ಸಾಬೂನು ಬಳಸಿ ಕೈತೊಳೆದುಕೊಂಡು ದೇವಾಲಯ ಪ್ರವೇಶಿಸಬೇಕು. ದೇವಸ್ಥಾನದ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸುಮಾರು ಆರು ಅಡಿ ಅಂತರದ ಸುರಕ್ಷತಾ ಅಂತರವನ್ನು ಕಾಯ್ದುಕೊಳ್ಳಬೇಕು.
►ಉಸಿರಾಟದ ತೊಂದರೆ, ಕೆಮ್ಮು, ಜ್ವರ, ನೆಗಡಿ ಮುಂತಾದ ರೋಗ ಲಕ್ಷಣಗಳನ್ನು ಹೊಂದಿರುವವರು ದೇವಾಲಯದ ಆವರಣದೊಳಗೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
►ಸ್ಮಾರ್ಟ್‌ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್‌ನ್ನು ಅಳವಡಿಸಿಕೊಳ್ಳಬೇಕು. ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ದರ್ಶನಕ್ಕೆ ಬರುವವರು ಹೂ.ಹಣ್ಣುಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರಬಾರದು.
►ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಯಾವುದೇ ಸೇವೆಗೆ ಅವಕಾಶವಿಲ್ಲ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 10 ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರು ದೇವಾಲಯಕ್ಕೆ ಬರಬಾರದೆಂದು ವಿನಂತಿಸಲಾಗಿದೆ.
►ದೇವಸ್ಥಾನದ ವಠಾರದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಮೇಲಿನ ಎಲ್ಲಾ ಮಾರ್ಗಸೂಚಿಗಳನ್ನು ದೇವಸ್ಥಾನದವರು ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತರು, ಸಾರ್ವಜನಿಕರು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News