ಪುತ್ತೂರು: ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

Update: 2020-06-06 12:40 GMT

ಪುತ್ತೂರು: ಕೊರೋನ ಮಹಾಮಾರಿಯಿಂದ ರಕ್ಷಣೆ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಬಾರಿ ಹಕ್ಕು ಪತ್ರ ವಿತರಣೆಯಲ್ಲಿ ತಡವಾಗಿದೆ. ಆದರೆ ಕಳೆದ 5 ವರ್ಷದಿಂದ ನಮ್ಮ ರಾಜ್ಯದಲ್ಲಿ ಹಕ್ಕು ಪತ್ರಗಳನ್ನು ಕಾಲಮಿತಿಯಲ್ಲೇ ಕೊಡಲಾಗಿದೆ. ಮುಂದಿನ ಜು.5ರ ಒಳಗೆ ಉಳಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಹಕ್ಕು ಪತ್ರ ವಿತರಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಪುತ್ತೂರಿನಲ್ಲಿ ನೂರಕ್ಕೆ ನೂರು ಹಕ್ಕು ಪತ್ರ ವಿತರಣೆ ಆಗಿರುವ ಹೆಗ್ಗಳಿಕೆ ಇರಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ತಾಲೂಕು ಆಡಳಿತದಿಂದ ಶನಿವಾರ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು. 

ಪುತ್ತೂರಿನಲ್ಲಿ 13,757 94 ಸಿಗೆ ಅರ್ಜಿಗಳು ಬಂದಿತ್ತು. ಈಗಾಗಲೇ 7,759 ಮಂದಿಗೆ 94 ಸಿ ಮಂಜೂರಾಗಿದೆ. 5,900 ಅರ್ಜಿಗಳು ತಿರಸ್ಕೃತಗೊಂಡಿವೆ. ನಗರಸಭೆ ವ್ಯಾಪ್ತಿಯಲ್ಲಿ 94 ಸಿಸಿ 87 ಅರ್ಜಿಗಳು ಇನ್ನು ಬಾಕಿ ಇದೆ. ಇನ್ನು 94 ಸಿ ಮತ್ತು 94 ಸಿಸಿ ಸೇರಿ ಒಟ್ಟು ಸುಮಾರು 350 ಅರ್ಜಿಗಲು ಬಾಕಿ ಆಗಿದೆ. ಅವೆಲ್ಲವನ್ನು ಜು.5ಕ್ಕೆ ವಿತರಣೆ ಮಾಡುವ ಕೆಲಸ ಆಗಬೇಕು ಎಂದು ತಾಲೂಕು ಆಡಳಿತಕ್ಕೆ ಸೂಚಿಸಿದರು.

ಮನೆ ನಿವೇಶನ ಹಕ್ಕು ಪತ್ರ ಪಡೆಯಲು ಯಾರೂ ಕೂಡಾ 10 ಪೈಸೆ ಅಧಿಕಾರಿಗಳಿಗೆ ಕೊಡಬೇಡಿ. ಅದೇ ರೀತಿ ಅಧಿಕಾರಿಗಳು ಕೂಡಾ ಬಡವನ ಕೈಯಿಂದ ಹಣ ಪಡೆಯಬೇಡಿ ಎಂದ ಶಾಸಕ ಸಂಜೀವ ಮಠಂದೂರು ಅವರು ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಭ್ರಷ್ಟಾಚಾರ ಮುಕ್ತವಾಗಲು ಸಾರ್ವಜನಿಕರು ಸಹಕಾರ ನೀಡಬೇಕು. ಯಾರೂ ಹಣ ಪಡೆಯದೆ ಕೆಲಸ ಮಾಡುತ್ತಾರೋ ಆಗ ಭ್ರಷ್ಟಾಚಾರ ಮುಕ್ತ ಭಾರತ ಆಗುತ್ತದೆ. ಮುಂದಿನ ದಿನದಲ್ಲಿ ಕೊರೋನಾ ಮಹಾಮಾರಿ ರೋಗಕ್ಕೆ ಔಷಧಿ ಕಂಡು ಹಿಡಿಯಲು ಸಾಧ್ಯವಿದೆ. ಭ್ರಷ್ಟಾರಕ್ಕೆ ಔಷಧಿ ಇಲ್ಲ ಎಂದರು.

ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿದರು. ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ವಿದ್ಯಾ ಆರ್ ಗೌರಿ, ತಾ.ಪಂ ಸದಸ್ಯರಾದ ಮುಕುಂದ ಗೌಡ, ಮೀನಾಕ್ಷಿ ಮಂಜುನಾಥ್, ದಿವ್ಯಾ ಪುರುಷೋತ್ತಮ, ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ರಮೇಶ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂದಾಯ ನಿರೀಕ್ಷಕ ವಿಜಯವಿಕ್ರಮ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News