ಉಡುಪಿ: ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 100 ಕೋವಿಡ್ ಸೋಂಕಿತರ ಬಿಡುಗಡೆ

Update: 2020-06-06 13:05 GMT

ಉಡುಪಿ, ಜೂ.6: ಜಿಲ್ಲೆಯಲ್ಲಿ ಇದುವರೆಗೆ 767 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 132 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈಗ 635 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ ಇಂದಿನಿಂದ ಸರಾಸರಿ 100 ಮಂದಿ ಪ್ರತಿದಿನ ಗುಣಮುಖರಾಗಿ ಬಿಡುಗಡೆಗೊಳ್ಳಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಣಿಪಾಲದ ಉಡುಪಿ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೆ 12,258 ಮಂದಿಯ ಕೋವಿಡ್ ಮಾದರಿ ಸಂಗ್ರಹಿಸಿದ್ದು, ಇದರಲ್ಲಿ 10,992 ಮಂದಿಯ ವರದಿ ನೆಗೆಟಿವ್ ಆಗಿದ್ದು, 769 ವರದಿ ಬರಲು ಬಾಕಿ ಇದೆ. ಪಾಸಿಟಿವ್ ಪ್ರಕರಣಗಳಲ್ಲಿ ಶೇ.98 ಮಂದಿಗೆ ರೋಗ ಲಕ್ಷಣಗಳೇ ಇಲ್ಲ. ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗಾಗಿ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ 125, ಕಾರ್ಕಳದಲ್ಲಿ 75, ಎಸ್‌ಡಿಎಂ ಕಾಲೇಜಿನಲ್ಲಿ 180 ಮತ್ತು ಕೊಲ್ಲೂರಿನಲ್ಲಿ 250 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೆ ಕಂಡು ಬಂದಿರುವ ಪಾಸಿಟಿವ್ ಪ್ರಕರಣಗಳಲ್ಲಿ ಯಾವುದೇ ರೋಗಿಗೆ ಆಕ್ಸಿಜಿನ್, ವೆಂಟಿಲೇಟರ್, ಐಸಿಯು ಸೇವೆ ನೀಡುವಂತಹ ಗಂಭೀರ ಪ್ರಕರಣ ಕಂಡುಬಂದಿಲ್ಲ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯವಾಗಿದ್ದಾರೆ. ಕ್ವಾರಂಟೈನ್ ಕೇಂದ್ರಗಳಿಂದ ತೆರಳಿದವರಿಂದ ಅವರ ಮನೆಯವರಿಗೆ ಹಾಗೂ ಸಮುದಾಯಕ್ಕೆ ರೋಗ ಹರಡಿಲ್ಲ. ಹೋಮ್ ಕ್ವಾರಂಟೈನ್‌ನಲ್ಲಿರುವವರ ಮನೆಗೆ ಪ್ರತಿದಿನ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪರಿಶೀಲಿಸುತ್ತಿದ್ದು, ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯ ಸರಕಾರಿ ಕೋವಿಡ್ ಪ್ರಯೋಗಾಲಯ 10 ದಿನದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಕೋವಿಡ್-19ರ ವಿರುದ್ದ ಹೋರಾಟದಲ್ಲಿ ಪ್ರತಿಯೊಬ್ಬರೂ ಸೇನಾನಿಗಳಂತೆ ಕಾರ್ಯ ನಿರ್ವಹಿಸಬೇಕಿದ್ದು, ಜಿಲ್ಲೆಯ ಎಲ್ಲಾ ಜನಪ್ರನಿಧಿಗಳು ಆರೋಗ್ಯ ಇಲಾಖೆಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲು ಬದ್ದರಿರುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ನುಡಿದರು.

ಪ್ರಸ್ತುತ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುತ್ತಿರುವ ನಾಗರಿಕರನ್ನು ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿಸಲು ಸೂಕ್ತ ವಾಹನ ವ್ಯವಸ್ಥೆ ಮಾಡುವಂತೆ ತಿಳಿಸಿದ ಅವರು, ಆರೋಗ್ಯ ಇಲಾಖೆಯಲ್ಲಿರುವ ಸಿಬ್ಬಂದಿಗಳ ಕೊರತೆ ಬಗ್ಗೆ ಹೊರ ಗುತ್ತಿಗೆ ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಜಿಲ್ಲೆಗೆ ಇನ್ನೊಂದು ಹೆಚ್ಚುವರಿ ಕೋವಿಡ್-19 ಆಸ್ಪತ್ರೆಯ ಅಗತ್ಯವಿದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ: ರಾಷ್ಟ್ರೀಯ ಹೆದ್ದಾರಿ 169ಎ ನಲ್ಲಿ ಪರ್ಕಳ ಸಮೀಪ ಗುಂಡಿ ಬಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಕೂಡಲೇ ಅದನ್ನು ಕಾಂಕ್ರೀಟ್‌ನಿಂದ ಮುಚ್ಚುವಂತೆ ಸೂಚಿಸಿದ ಸಂಸದೆ, ಭೂಸ್ವಾಧೀನ ಪ್ರಕ್ರಿಯೆ ಯನ್ನು ಚುರುಕುಗೊಳಿಸಿ ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸೂಚಿಸಿದರು.

ಕುಂದಾಪುರ ಶಾಸ್ತ್ರೀ ಸರ್ಕಲ್ ಕಾಮಗಾರಿ ಪ್ರಗತಿ ಬಗ್ಗೆ ಉತ್ತರಿಸಿದ ಅಧಿಕಾರಿಗಳು, ಕೋವಿಡ್-19 ಕಾರಣದಿಂದ ಕಾರ್ಮಿಕರು ಊರಿಗೆ ತೆರಳಿದ್ದು, ಕಾರ್ಮಿಕರ ಸಮಸ್ಯೆಯಿಂದ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನು 2 ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ತಿಳಿಸಿದರು.

ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಹಾನಿಯಾದಲ್ಲಿ ಮೆಸ್ಕಾಂನಿಂದ ಶೀಘ್ರದಲ್ಲಿ ದುರಸ್ತಿ ಮಾಡುವಂತೆ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿ ಕೊಳ್ಳುವಂತೆ ಸಂಸದೆ ಸೂಚಿಸಿದರು. ಈಗಾಗಲೇ 140 ಮಂದಿ ಗ್ಯಾಂಗ್‌ಮನ್ ಗಳ ನೇಮಕ ಮಾಡಿಕೊಂಡಿದ್ದು, ಇನ್ನೂ 140 ಮಂದಿ ನೇಮಕಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.

ಕಡಲಕೊರೆತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶೋಭಾ ಸೂಚಿಸಿದರು. ಕುಡಿಯುವ ನೀರು ಯೋಜನೆಯ ಕುರಿತಂತೆ ನಿಟ್ಟೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಶೇ.90 ಸಿವಿಲ್ ಕೆಲಸಗಳು ಮುಕ್ತಾಯಗೊಂಡಿದ್ದು, ಎಲೆಕ್ಟ್ರಿಕ್ ಕೆಲಸಗಳು ಬಾಕಿ ಇದೆ. 2 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆಎಂದು ಅಧಿಕಾರಿಗಳು ತಿಳಿಸಿದರು.

ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯ 1,34,000 ರೈತರ ಖಾತೆಗಳಿಗೆ 94.86 ಕೋಟಿ ರೂ. ಜಮೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರೈಸುವಂತೆ ಸಂಸದೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News