ಕುಟುಂಬದಿಂದ ಹೊರದಬ್ಬಲ್ಪಟ್ಟ ತಾಯಿ, ಮಗನಿಗೆ ಸ್ವಂತ ಮನೆಯಲ್ಲಿ ಆಶ್ರಯ ನೀಡಿದ ಅಲ್ತಾಫ್

Update: 2020-06-06 14:13 GMT
ಲಾರಿ ಚಾಲಕ ಅಲ್ತಾಫ್, ಅನಾರೋಗ್ಯ ಪೀಡಿತ ಮಗನೊಂದಿಗೆ ರತ್ನಮ್ಮ

ಬಂಟ್ವಾಳ, ಜೂ. 6: ಸ್ವಂತ ಮಗಳು, ಸೊಸೆ, ಸಂಬಂಧಿಕರಿಗೆ ಭಾರವಾಗಿ ಕುಟುಂಬದಿಂದ ಹೊರದಬ್ಬಲ್ಪಟ್ಟು ದಿಕ್ಕುದೆಸೆ ಇಲ್ಲದೆ ಬಸ್ ತಂಗುದಾಣದಲ್ಲಿ ದಿನ ದೂಡುತ್ತಿದ್ದ ವೃದ್ಧೆ ತಾಯಿ, ಅನಾರೋಗ್ಯ ಪೀಡಿತ ಮಗನನ್ನು ತನ್ನ ಕುಟುಂಬ ವಾಸವಿದ್ದ ಮನೆಗೆ ಕರೆದುಕೊಂಡು ಬಂದು ಆಶ್ರಯ ನೀಡಿದ ಅಲ್ತಾಫ್ ಎಂಬವರ ಮಾನವೀಯತೆಗೆ ಸರಿಸಾಟಿ ಯಾವುದಿದೆ?.

ಇದು ಹಾಸನ ಜಿಲ್ಲೆಯ ಬೇಳೂರಿನ ರತ್ನಮ್ಮ ಮತ್ತು ಅವರ ಅನಾರೋಗ್ಯ ಪೀಡಿತ ಮಗನಿಗೆ ಆಶ್ರಯದಾತರಾದ ಬಿ.ಸಿ.ರೋಡ್ ತಲಪಾಡಿಯ ಟಿ.ಮುಹಮ್ಮದ್ ಎಂಬವರ ಪುತ್ರ ಅಲ್ತಾಫ್ ಎಂಬವರ ಮಾನವೀಯತೆಯ ಕಥೆ. ಟಿಪ್ಪರ್ ಲಾರಿ ಚಾಲಕನಾಗಿ ದುಡಿಯುತ್ತಿರುವ ಅಲ್ತಾಫ್ ಅವರದ್ದು ಬಡತನದ ಕುಟುಂಬ ಆದರೂ ಯಾರೂ ಇಲ್ಲದೆ ಅಲೆದಾಡುತ್ತಿದ್ದ ತಾಯಿ, ಮಗನನ್ನು ತನ್ನ ಕುಟುಂಬದವರಂತೆ ಕಾಣುವ ಮೂಲಕ ಹೃದಯ ವಿಶಾಲತೆಯ ಶ್ರೀಮಂತಿಕೆಯನ್ನು ತೋರಿಸಿಕೊಟ್ಟಿದ್ದಾರೆ.

ಕುಟುಂಬ ಪರಿವಾರದೊಂದಿಗೆ 24 ವರ್ಷಗಳ ಹಿಂದೆ ಹಾಸನದ ಬೇಳೂರಿನಿಂದ ವಲಸೆ ಬಂದ ರತ್ನಮ್ಮ ಕುಟುಂಬ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿತ್ತು. ಸ್ಥಳೀಯ ಮದುವೆ ಹಾಲ್ ಒಂದರಲ್ಲಿ ಪಾತ್ರೆ ತೊಳೆದು ಒಂದಷ್ಟು ಹೆಚ್ಚುವರಿ ಸಂಪಾದನೆ ಮಾಡುತ್ತಿದ್ದ ರತ್ನಮ್ಮರಿಗೆ ಮೂವರು ಮಕ್ಕಳು. ಇಬ್ಬರು ಪುತ್ರರು, ಓರ್ವ ಪುತ್ರಿಯಲ್ಲಿ ಓರ್ವ ಪುತ್ರ ಐದು ವರ್ಷಗಳ ಹಿಂದೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇರುವ ಓರ್ವ ಪುತ್ರ ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ಸೇರಿದ್ದಾನೆ.

ಪೀಠೋಪಕರಣ ತಯಾರಿ ಕೆಲಸ ಮಾಡುತ್ತಿದ್ದ ಮಗ ಆರು ತಿಂಗಳ ಹಿಂದೆ ಪಾರ್ಶ್ವವಾಯು ಪೀಡಿತನಾದ ಬಳಿಕ ರತ್ನಮ್ಮ ಕೆಲಸಕ್ಕೆ ಹೋಗದೆ ಮಗನ ಚಾಕರಿಯಲ್ಲಿ ಬಾಕಿಯಾದರು. ಹೀಗಾಗಿ ತಾಯಿ, ಮಗ ಕುಟುಂಬಕ್ಕೆ ಭಾರವಾದರು. ಕೊನೆಗೆ ಮನೆಯಿಂದ ಹೊರದಬ್ಬಲ್ಪಟ್ಟರು. ದಿಕ್ಕುದೆಸೆ ಇಲ್ಲದ ತಾಯಿ ಮಗ ಬಿ.ಸಿ.ರೋಡ್ ತಲಪಾಡಿಯ ಬಸ್ ತಂಗುದಾಣದಲ್ಲಿ ಊಟ, ತಿಂಡಿ ಇಲ್ಲದೆ ದಿನ ದೂಡುತ್ತಿದ್ದರು.‌ ಇದನ್ನು ಕಂಡ ಅಲ್ತಾಫ್ ಇಬ್ಬರನ್ನೂ ಕರೆದುಕೊಂಡು ಬಂದು ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾರೆ.

ತನ್ನ ಕುಟುಂಬದ ಜೊತೆ ಊಟ, ತಿಂಡಿ, ಸ್ನಾನ, ನಿದ್ದೆ ಎಲ್ಲವೂ ಮಾಡುತ್ತಾ ಈ ತಾಯಿ, ಮಗ ಅಲ್ತಾಫ್ ಅವರ ಮನೆಯಲ್ಲಿ ಎರಡು ತಿಂಗಳ ಇದ್ದರು. ಬಳಿಕ ಅಲ್ತಾಫ್ ಅವರು ಬಾಡಿಗೆ ಮನೆಯೊಂದನ್ನು ಮಾಡಿ ತಾಯಿ, ಮಗನನ್ನು ಅಲ್ಲಿ ವಾಸಕ್ಕೆ ವ್ಯವಸ್ತೆ ಮಾಡಿದರು. ಗ್ಯಾಸ್, ಸ್ಟವ್ ಹಾಗೂ ಸಾಮಗ್ರಿಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಮನೆ ಬಾಡಿಗೆಯನ್ನೂ ಅಲ್ತಾಫ್ ಅವರೇ ಭರಿಸುತ್ತಿದ್ದಾರೆ. ಅಲ್ಲದೆ ಎರಡು ತಿಂಗಳಿಂದ ಬಾಡಿಗೆಯಲ್ಲಿರುವ ತಾಯಿ, ಮಗನಿಗೆ ಊಟ, ತಿಂಡಿ, ಆಹಾರ ಸಾಮಗ್ರಿ, ಚಿಕಿತ್ಸೆ, ಔಷಧ ಸಹಿತ ಎಲ್ಲವನ್ನೂ ಅಲ್ತಾಫ್ ಅವರೇ ತಲುಪಿಸುತ್ತಿದ್ದಾರೆ. ತನ್ನ ಕುಟುಂಬದ ಸದಸ್ಯರಂತೆ ಕಾಣುತ್ತಿರುವ ತಾಯಿ, ಮಗನಿಗೆ ಅಲ್ತಾಫ್ ಅವರು ಯಾವುದೇ ಕೊರತೆ ಬಾರದಂತೆ ನೋಡುತ್ತಿದ್ದಾರೆ.

ಕೊರೋನ, ಲಾಕ್ ಡೌನ್ ನ ಈ ಕಾಲದಲ್ಲಿ ಇಡೀ ಜಗತ್ತೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.‌ ಈ ಮಧ್ಯೆ ಟಿಪ್ಪರ್ ಲಾರಿಯಲ್ಲಿ ಚಾಲಕನಾಗಿ ದುಡಿಯುವ ಅಲ್ತಾಫ್ ತನ್ನ ಕುಟುಂಬದ ಜೊತೆ ತನಗೆ ಪರಿಚಯವೇ ಇಲ್ಲದ ಅನಾರೋಗ್ಯ ಪೀಡಿತ ಮಗ, ತಾಯಿಯನ್ನು ಸಾಕಬೇಕು. ಅವರಿಗೆ ಚಿಕಿತ್ಸೆ ನೀಡಬೇಕು.

"ಅವರಿಗೆ ಕೈಲಾದ ಸಹಾಯ ಮಾಡುತ್ತೇನೆ. ಬಸ್ ತಂಗುದಾಣದಲ್ಲಿ ಕೂತು ವಾರದಿಂದ ಅಳುತ್ತಿದ್ದ ತಾಯಿ, ಮಗನನ್ನು ನೋಡಿಯೂ ನೋಡದ ಹಾಗೆ ಎಷ್ಟು ದಿನ ಇರಲು ಸಾಧ್ಯ. ಅವರೂ ಮನುಷ್ಯರಲ್ಲವೇ? ಕೊನೆಗೆ ಅವರನ್ನು ಮನೆಗೆ ಕರೆದುಕೊಂಡು ಬಂದೆ" ಎಂದು ತನ್ನ ಮಾನವೀಯತೆಯ ನುಡಿಗಳನ್ನು ಅಲ್ತಾಫ್ ಅವರು ಆಡುತ್ತಾರೆ.

"ಅಲ್ತಾಫ್ ಅಣ್ಣ ಬಿಟ್ಟರೆ ನನಗೆ ಬೇರೆ ಯಾರೂ ಇಲ್ಲ"

ಅಲ್ತಾಫ್ ಅವರನ್ನು ಬಿಟ್ಟರೆ ಈಗ ನಮಗೆ ಬೇರೆ ಯಾರೂ ಇಲ್ಲ. ಬಸ್ ಸ್ಟ್ಯಾಂಡ್ ನಲ್ಲಿದ್ದ ನಮ್ಮನ್ನು ಅವರ ಮನೆಯಲ್ಲಿ ಎರಡು ತಿಂಗಳು ಇರಿಸಿದರು. ಈಗ ಬಾಡಿಗೆ ಮನೆ ಮಾಡಿ ಕೊಟ್ಟಿದ್ದಾರೆ. ಮಗನನ್ನು ಆಗಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಆತನಿಗೆ ಬಿಪಿ, ಶುಗರ್ ಹೆಚ್ಚಾಗಿದೆ. ತುಂಬಾ ಔಷಧ ಬೇಕು. ಮಗನಿಗೆ ನಡೆಯಲು ಆಗದಿರುವುರಿಂದ ಆಸ್ಪತ್ರೆಗೆ ಆಟೋ ರಿಕ್ಷಾದಲ್ಲೇ ಹೋಗಬೇಕು. ಆಟೋ ಬಾಡಿಗೆ, ಆಸ್ಪತ್ರೆ ಬಿಲ್ ಕಟ್ಟೋಕೆ ಹಣ ಬೇಕು. ಊಟ, ತಿಂಡಿಯೂ ಬೇಕು. ಮನೆ ಬಾಡಿಗೆ, ವಿದ್ಯುತ್ ಬಿಲ್ ಕಟ್ಟಬೇಕು. ಎಲ್ಲವನ್ನೂ ಅಲ್ತಾಫ್ ಅಣ್ಣನೇ ಕೊಡುತ್ತಿದ್ದಾರೆ. ಅವರೂ ಬಡವರು. ಕೆಲಸ ಇಲ್ಲದೆ ಅವರೂ ಕಷ್ಟದಲ್ಲಿ ಇದ್ದಾರೆ. ಅವರ ಮಗನಿಗೂ ಶಸ್ತ್ರಚಿಕಿತ್ಸೆ ಆಗಿ ತುಂಬಾ ಹಣ ಖರ್ಚು ಮಾಡಿದರು. ನನಗೆ ನನ್ನ ಮಗನೇ ಆಧಾರ. ಯಾರಾದರೂ ಸಹಾಯ ಮಾಡಿ ನನ್ನ ಮಗನನ್ನು ಉಳಿಸಿಕೊಡಿ ಎಂದು ರತ್ನಮ್ಮ ಕೈ ಮುಗಿಯುತ್ತಾ ಹೇಳುತ್ತಾರೆ.

ತಲಪಾಡಿಯ ಬಸ್ಸು ತಂಗುದಾಣದಲ್ಲಿ ಒಂದು ವಾರಗಳ ಕಾಲ ಧೂಳು, ಬಿಸಿಲಿನಲ್ಲಿ ಊಟ, ತಿಂಡಿ ಇಲ್ಲದೆ ಹಗಲು, ರಾತ್ರಿ ಕಳೆಯುತ್ತಿದ್ದ ತಾಯಿ ಮಗನನ್ನು ನೋಡಿ ಮನಸ್ಸು ಕೇಳಲಿಲ್ಲ. ಕೊನೆಗೆ ಇಬ್ಬರನ್ನೂ ಕರೆದುಕೊಂಡು ಬಂದು ಮನೆಯಲ್ಲಿ ಆಶ್ರಯ ನೀಡಿದೆ. ಎರಡು ತಿಂಗಳು ಮನೆಯಲ್ಲಿದ್ದ ಅವರಿಗೆ ಈಗ ಬಾಡಿಗೆ ಮನೆಯೊಂದು ಮಾಡಿ ಕೊಟ್ಟಿದ್ದೇನೆ. ಅವರ ಮಗಳು, ಸಹೋದರರ ಸಹಿತ ಎಲ್ಲರೂ ಬಿ.ಸಿ.ರೋಡ್ ಪರಿಸರದಲ್ಲೇ ಇದ್ದಾರೆ. ಮಗನಿಗೆ ಅನಾರೋಗ್ಯದ ಬಳಿಕ ಅವರನ್ನು ಹೊರದಬ್ಬಿದ್ದಾರೆ. ಅನಾರೋಗ್ಯದಿಂದ ಮಗನಿಗೆ ನಡೆಯಲೂ ಆಗುತ್ತಿಲ್ಲ. ಆತನ ಪತ್ನಿ ತನ್ನ ಪುತ್ರಿಯೊಂದಿಗೆ ತಾಯಿ ಮನೆಗೆ ಹೋಗಿದ್ದಾಳೆ. ಇರುವ ಒಬ್ಬಳು ಮಗಳು ನಮ್ಮನ್ನು ದೂರ ಮಾಡಿದ್ದಾಳೆ ಎಂದು ರತ್ನಮ್ಮ ಹೇಳುತ್ತಿದ್ದಾರೆ. ಆಕೆಯ ಓರ್ವ ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮೃತ ಮಗನ ಇನ್ಶುರೆನ್ಸ್ ಹಣಕ್ಕಾಗಿ ಅಲೆದಾಡುತ್ತಿದ್ದಾರೆ. ಈವರೆಗೆ ಅವರಿಗೆ ಹಣ ಸಿಕ್ಕಿಲ್ಲ. ಹಣ ಸಿಕ್ಕರೆ ನಾನು ಎಲ್ಲಿಯಾದರೂ ಲೀಝ್ ಗೆ ಮನೆ ಮಾಡುತ್ತೇನೆ ಎನ್ನುತ್ತಾರೆ. ಹಣ ಸಿಗುವಂತಾಗಲು ಅವರಿಗೆ ಅಧಿಕಾರಿಗಳು‌ ಅಥವಾ ಯಾರಾದರೂ ಸಹಾಯ ಮಾಡಬೇಕು.

- ಅಲ್ತಾಫ್, ತಾಯಿ, ಮಗನಿಗೆ ಆಶ್ರಯ ನೀಡಿರುವ ತಲಪಾಡಿ ನಿವಾಸಿ

ಸಹಾಯ ಮಾಡುವುದಾದರೆ:

ತಾಯಿ ಹಾಗೂ ಅನಾರೋಗ್ಯ ಪೀಡಿತ ಮಗನಿಗೆ ಸಹಾಯ ಮಾಡುವವರು, Rathnamma, Corporation Bank, B.C.Road Branch, AC Number: 520101266931941, IFSC Coad: CORP0001659 ಗೆ ಧನ ಸಹಾಯ ಮಾಡಬಹುದು.

Writer - - ಇಮ್ತಿಯಾಝ್ ಶಾ ತುಂಬೆ

contributor

Editor - - ಇಮ್ತಿಯಾಝ್ ಶಾ ತುಂಬೆ

contributor

Similar News