ಉಡುಪಿಯಲ್ಲಿ ಶನಿವಾರ 121 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 888ಕ್ಕೆ ಏರಿಕೆ

Update: 2020-06-06 14:37 GMT
ಸಾಂದರ್ಭಿಕ ಚಿತ್ರ

ಉಡುಪಿ, ಜೂ.6: ಶನಿವಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 121 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಉಡುಪಿ, ರಾಜ್ಯದಲ್ಲೇ ಒಂದು ಸಾವಿರ ಪಾಸಿಟಿವ್ ವ್ಯಕ್ತಿಗಳನ್ನು ಕಂಡ ಮೊದಲ ಜಿಲ್ಲೆ ಎನಿಸಿಕೊಳ್ಳುವತ್ತ ದಾಪುಗಾಲು ಹಾಕಿದೆ. ಇಂದು ಸಂಜೆಯವರೆಗೆ ಒಟ್ಟು 888 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಉಡುಪಿ ಈಗಲೂ ರಾಜ್ಯದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಉಡುಪಿಯ ನಂತರದ ಸ್ಥಾನದಲ್ಲಿರುವ ಕಲಬುರಗಿಯಲ್ಲಿ ಇಂದು 69 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಒಟ್ಟು 621 ಸೋಂಕಿತರನ್ನು ಹೊಂದಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರದಲ್ಲಿ 103 ಪಾಸಿಟಿವ್ ಪ್ರಕರಣ ಇಂದು ಪತ್ತೆಯಾಗಿದ್ದು ಒಟ್ಟಾರೆಯಾಗಿ 476 ಸೋಂಕಿತರೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇಂದು ಸೋಂಕು ಪತ್ತೆಯಾದ 121 ಮಂದಿಯಲ್ಲಿ 71 ಪುರುಷರು ಹಾಗೂ 34 ಮಂದಿ ಮಹಿಳೆಯರು ಅಲ್ಲದೇ 10ವರ್ಷದೊಳಗಿನ 16 ಮಂದಿ ಮಕ್ಕಳಿದ್ದಾರೆ. ಅಲ್ಲದೇ 60 ವರ್ಷ ಮೇಲ್ಪಟ್ಟ ಆರು ಮಂದಿ ಹಿರಿಯ ನಾಗರಿಕರೂ ಇವರಲ್ಲಿದ್ದಾರೆ. ಎಲ್ಲರನ್ನೂ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶನಿವಾರ ಪಾಸಿಟಿವ್ ಪ್ರಕರಣ ಕಂಡುಬಂದವರಲ್ಲಿ 30 ಮಂದಿ ಉಡುಪಿ ತಾಲೂಕಿನವರು, 34 ಮಂದಿ ಕುಂದಾಪುರ ಹಾಗೂ 57 ಮಂದಿ ಕಾರ್ಕಳ ತಾಲೂಕಿನವರು ಎಂದು ಅವರು ವಿವರಿಸಿದರು.

ಶನಿವಾರ 101 ಮಂದಿ ಬಿಡುಗಡೆ:  ಕೊರೋನ ಪಾಸಿಟಿವ್ ಬಂದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ 101 ಮಂದಿಯನ್ನು ಶನಿವಾರ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಚಿಕಿತ್ಸೆಯ ಬಳಿಕ ಗುಣಮುಖರಾದ ಸೋಂಕಿತರ ಸಂಖ್ಯೆ ಈಗ 233ಕ್ಕೇರಿದೆ. ಜಿಲ್ಲೆಯಲ್ಲೀಗ 654 ಸಕ್ರೀಯ ಪ್ರಕರಣಗಳಿವೆ ಎಂದು ಡಾ.ಸೂಡ ವಿವರಿಸಿದರು.

226 ಸ್ಯಾಂಪಲ್ ನೆಗೆಟಿವ್: ಶನಿವಾರ ಜಿಲ್ಲೆಯಲ್ಲಿ ಒಟ್ಟು 347 ಸ್ಯಾಂಪಲ್‌ಗಳ ವರದಿ ಬಂದಿದ್ದು, ಇವುಗಳಲ್ಲಿ 121 ಪಾಸಿಟಿವ್ ಆಗಿದ್ದರೆ, ಉಳಿದ 226 ಸೋಂಕಿಗೆ ನೆಗೆಟಿವ್ ಆಗಿವೆ. ವಿಶೇಷವೆಂದರೆ, ಕೊರೋನ ವೈರಸ್‌ನ ಉಪಟಳ ಆರಂಭಗೊಂಡ ನಂತರ ಇದೇ ಮೊದಲ ಬಾರಿ ಕೋವಿಡ್-19ಕ್ಕಾಗಿ ರೋಗದ ಗುಣಲಕ್ಷಣವಿರುವ ಯಾರೊಬ್ಬರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿಲ್ಲ ಎಂದು ಡಾ.ಸೂಡ ತಿಳಿಸಿದರು.

ಹೀಗಾಗಿ ಈವರೆಗೆ ಸಂಗ್ರಹಿಸಿದ 12,528 ಗಂಟಲುದ್ರವದ ಮಾದರಿಗಳಲ್ಲಿ ಶನಿವಾರದವರೆಗೆ ಒಟ್ಟು 12,106ರ ಪರೀಕ್ಷಾ ವರದಿ ಬಂದಿವೆ. ಇದರಲ್ಲಿ 11,218 ನೆಗೆಟಿವ್ ಆಗಿದ್ದರೆ, ಇಂದಿನ 121 ಸೇರಿ ಒಟ್ಟು 888 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 422 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ ಎಂದು ಅವರು ಹೇಳಿದರು.

ಇಂದು ರೋಗದ ಗುಣಲಕ್ಷಣದೊಂದಿಗೆ ಒಟ್ಟು 12 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 9 ಮಂದಿ ಪುರುಷರು, ಮೂವರು ಮಹಿಳೆಯರಿದ್ದಾರೆ. ಕೊರೋನ ಶಂಕಿತರು ಏಳು ಮಂದಿ, ಉಸಿರಾಟದ ತೊಂದರೆಯವರು ಇಬ್ಬರು ಹಾಗೂ ಶೀತಜ್ವರದವರು ಮೂವರು ಇದರಲ್ಲಿ ಸೇರಿದ್ದಾರೆ.

ಶನಿವಾರ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ 6 ಮಂದಿ ಬಿಡುಗಡೆಗೊಂಡಿದ್ದು, 74 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 764 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 14 ಮಂದಿ ಶನಿವಾರ ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5033 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4306ಮಂದಿ (ಇಂದು 36) 28 ದಿನಗಳ ನಿಗಾವಣೆ ಹಾಗೂ 4829 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗಲೂ 132 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 80 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದು, ಕೇವಲ ನಾಲ್ವರು ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News