ದ.ಕ.: ಎಸೆಸ್ಸೆಲ್ಸಿ ಪರೀಕ್ಷೆಗೆ 30,835 ವಿದ್ಯಾರ್ಥಿಗಳು ನೋಂದಣಿ

Update: 2020-06-06 15:01 GMT

ಮಂಗಳೂರು, ಜೂ.6: ದ.ಕ.ಜಿಲ್ಲೆಯ 95 ಪರೀಕ್ಷಾ ಕೇಂದ್ರಗಳಲ್ಲಿ ಜೂ.25ರಿಂದ ನಡೆಯಲಿರುವ ಎಸೆಸ್ಸ್ಸೆಲ್ಸಿ ಪರೀಕ್ಷೆಗೆ 30,835 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾಹಿತಿ ನೀಡಿದ್ದಾರೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿಯಿಂದ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ತೋರಿಸಿ ಬಸ್‌ನಲ್ಲಿ ಪಯಣಿಸಬಹುದು. ಜೂ.25 ರಿಂದ ಜುಲೈ 4ರವರೆಗೆ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ 95 ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ಹೆಚ್ಚುವರಿಯಾಗಿ 19 ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಪತ್ರಿ ಕೊಠಡಿಗೆ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನ ಥರ್ಮಲ್ ಸ್ಕಿಥನ್ ಮೂಲಕ ಪರೀಕ್ಷಿಸಲಾಗುತ್ತದೆ. ವಿದ್ಯಾರ್ಥಿಗೆ ರೋಗದ ಯಾವುದೇ ಲಕ್ಷಣ ಕಂಡು ಬಂದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತೇಕವಾದ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 102 ವಿಶ್ರಾಂತಿ ಕೊಠಡಿ ಸಿದ್ಧಪಡಿಸಲಾಗುವುದು. ಪರೀಕ್ಷೆ ಕೊಠಡಿಗಳು ಸಂಪೂರ್ಣವಾಗಿ ಸ್ಯಾನಿಟೈಸರ್‌ಗೊಳಿಸಲಾಗುತ್ತದೆ ಎಂದು ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸ್ಕೌಟ್ ಮತ್ತು ಗೈಡ್ ಸಂಸ್ಥೆ ಹಾಗೂ ಜಿ. ಶಂಕರ್ ಕುಟುಂಬದ ವತಿಯಿಂದ ಉಚಿತ ಮಾಸ್ಕ್ ನೀಡಲಾಗುತ್ತಿದೆ. ಪ್ರತೀ ಪರೀಕ್ಷಾ ಕೇಂದ್ರಕ್ಕೆ 4 ಜನ ಸ್ಕೌಟ್ ಶಿಕ್ಷಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾಸರಗೋಡಿನ 345 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದು, ಅವರು ಹಾಲ್ ಟಿಕೆಟ್ ತೋರಿಸಿ ಗಡಿಯಲ್ಲಿ ಪ್ರವೇಶಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯು ಜೂ.18ರಂದು ನಡೆಯಲಿದ್ದು, ಜಿಲ್ಲೆಯ 26,704 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 51 ಪರೀಕ್ಷೆ ಕೇಂದ್ರಗಳನ್ನು ಗುರುತಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅಗತ್ಯವಾದ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News