ಉಡುಪಿ: ಕೋವಿಡ್ ಚಿಕಿತ್ಸೆಯಲ್ಲಿ ಹಣ ವಂಚನೆ ಆರೋಪದ ಸಂದೇಶ ವೈರಲ್; ಯುವಕನ ಬಂಧನ

Update: 2020-06-06 15:51 GMT

ಶಂಕರನಾರಾಯಣ, ಜೂ.6: ಕೋವಿಡ್ -19 ರೋಗಿಗಳಿಗೆ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯು ಲಕ್ಷಾಂತರ ರೂ. ಹಣ ಪಡೆದು ಕೊಳ್ಳುತ್ತಿದೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಆರೋಪದಡಿ ಯುವಕನೋರ್ವನನ್ನು ಶಂಕರನಾರಾಯಣ ಪೊಲೀಸರು ಇಂದು ಬಂಧಿಸಿದ್ದಾರೆ.

ಕಮಲಶಿಲೆಯ ಸುರೇಶ್ ಕುಲಾಲ್(27) ಬಂಧಿತ ಆರೋಪಿ. ‘ಉಡುಪಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯು ಕೋವಿಡ್ 19 ರೋಗಿಗಳಿಗೆ ಸಂಬಂಧಿಸಿ 3.5ಲಕ್ಷ ರೂ. ಹಣ ಪಡೆದುಕೊಳ್ಳುತ್ತಿದೆ. ಆದರೂ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ’ ಎಂಬ ಸಂದೇಶವನ್ನು ಈತ ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ವೈರಲ್ ಮಾಡಿರುವುದಾಗಿ ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅದರಂತೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News