ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಮುಂಚಿತ ಪಾವತಿಸುವುದು ಕಡ್ಡಾಯವಲ್ಲ: ಫ್ರೆಟರ್ನಿಟಿ ಮೂವ್‌ಮೆಂಟ್

Update: 2020-06-06 16:22 GMT

ಮಂಗಳೂರು,ಜೂ.6:ಹಿಂದಿನ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಬಾಕಿ ಉಳಿದಿದ್ದು ಈ ನಡುವೆ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಶುಲ್ಕವನ್ನು ಪಾವತಿಸಲು ಕೆಲವು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಫ್ರೆಟರ್ನಿಟಿ ಮೂವ್‌ಮೆಂಟ್ ಜಿಲ್ಲಾ ಘಟಕದ ಸದಸ್ಯರು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರನ್ನು ಶನಿವಾರ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಖಾಸಗಿ ಕಾಲೇಜಿನ ಪ್ರಾಂಶುಪಾಲರು ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕವನ್ನು ಕಡ್ಡಾಯವಾಗಿ ಮುಂಚಿತವಾಗಿ ಪಾವತಿಸಬೇಕೆಂದು ತಿಳಿಸಿಲ್ಲ. ಸ್ವಇಚ್ಛೆಯಿಂದ ಪಾವತಿಸಿದರೆ ಶುಲ್ಕವನ್ನು ಪಡೆಯುತ್ತಿರುವುದಾಗಿ ಭೇಟಿ ನೀಡಿದ ಘಟಕದ ಸದಸ್ಯರಿಗೆ ತಿಳಿಸಿದ್ದಾರೆ ಎಂದು ಸಂಘಟನೆಯ ರಾಜಾಧ್ಯಕ್ಷ ತಪ್ಲೀಲ್ ಯು. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕೌಡೌನ್ ಕಾರಣದಿಂದ ಪದವಿ ತರಗತಿಗಳ ಸೆಮಿಸ್ಟರ್ ನಡೆಸಲು ಅಸಾಧ್ಯವಾಗಿದ್ದು ,ಈ ನಡುವೆ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸುವಂತೆ ವಿದ್ಯಾರ್ಥಿಗಳ ಮೊಬೈಲ್‌ಗೆ ಸಂದೇಶ ಕಾಲೇಜಿನಿಂದ ರವಾನೆಯಾಗುತ್ತಿರುವುದರಿಂದ ಗೊಂದಲಕ್ಕೊಳಗಾದ ವಿದ್ಯಾರ್ಥಿಗಳು ತಮ್ಮ ಸಂಘಟನೆಯ ನಾಯಕರೊಂದಿಗೆ ಚರ್ಚಿಸಿ ಈ ಬಗ್ಗೆ ಕಾಲೇಜಿನ ಮುಖ್ಯಸ್ಥರನ್ನು ಶನಿವಾರ ಭೇಟಿ ಮಾಡಿದ್ದಾರೆ.

ಸೆಮಿಸ್ಟರ್ ಶುಲ್ಕ ಪಡೆಯದಂತೆ ಉನ್ನತ ಶಿಕ್ಷಣ ಸಚಿವರಿಗೆ ದೂರು: ರಾಜ್ಯದ ಕೆಲವು ವಿಶ್ವ ವಿದ್ಯಾನಿಲಯಗಳು ತಮ್ಮ ಕಾಲೇಜುಗಳಿಗೆ ಲಾಕ್ ಡೌನ್ ಮುಗಿದು ತರಗತಿಗಳು ಆರಂಭವಾಗುವುದಕ್ಕೆ ಮುಂಚಿತವಾಗಿ ಸೆಮಿಸ್ಟರ್ ಶುಲ್ಕ ಸಂಗ್ರಹಿಸಲು ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ .ಈ ಬಗ್ಗೆ ಗಮನಹರಿಸಿ ಈ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ವಿದ್ಯಾನಿಲಯಗಳ ಮುಖ್ಯಸ್ಥರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಮುಖ್ಯಸ್ಥರನ್ನು ಸಂಪರ್ಕಿಸಿದಾಗ ವಿದ್ಯಾರ್ಥಿಗಳ ದಾಖಲೆಗಳನ್ನು ನೀಡುವಂತೆ ಕೋರಲಾಗಿದೆ ಹೊರತು ಶುಲ್ಕಪಾವತಿಸಲು ಒತ್ತಾಯಿಸಿಲ್ಲ ಎಂದು ತಿಳಿಸಿರುವುದಾಗಿ ಫ್ರೆಟರ್ನಿಟಿ ಮೂವ್ ಮೆಂಟ್‌ನ ರಾಜ್ಯಾಧ್ಯಕ್ಷ ತಪ್ಲೀಲ್ ಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News