​ಜೂ.8ರಿಂದ ಮಸೀದಿಯಲ್ಲಿ ಪ್ರಾರ್ಥನೆಗೆ ಅನುಮತಿ: ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸುನ್ನಿ ಜಮೀಯ್ಯತುಲ್ ಉಲಮಾ ಸೂಚನೆ

Update: 2020-06-06 18:17 GMT

ಮಂಗಳೂರು, ಜೂ.6: ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳುಗಳ ಕಾಲ ಪ್ರಾರ್ಥನೆ ಸಲ್ಲಿಸಲು ನಿರ್ಬಂಧಿಸಲಾಗಿತ್ತು. ಇದೀಗ ರಾಜ್ಯ ಸರಕಾರವು ಜೂ.8ರಿಂದ ಮಸೀದಿ ತೆರೆಯಲು ಅನುಮತಿ ನೀಡಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸುನ್ನಿ ಜಮೀಯ್ಯತುಲ್ ಉಲಮಾ ಕರ್ನಾಟಕ ಸಲಹೆ-ಸೂಚನೆ ನೀಡಿದೆ.

ಜುಮಾ, ಜಮಾಅತ್‌ನಲ್ಲಿ ಭಾಗವಹಿಸುವವರಿಂದ ಕೊರೋನ ಸೋಂಕು ಹರಡುವ ಸಾಧ್ಯತೆ ಇದ್ದಲ್ಲಿ, ಆ ಬಗ್ಗೆ ಭಯ ಹೊಂದಿದವರು ಜಮಾಅತ್‌ಗಳಲ್ಲಿ ಭಾಗವಹಿಸದಿರಲು ಇಸ್ಲಾಮಿ ಕರ್ಮಶಾಸ್ತ್ರವು ವಿನಾಯಿತಿ ನೀಡಿದೆ. ಇಂಥವರು ಮನೆಯಲ್ಲಿಯೇ ನಮಾಝ್ ನಿರ್ವಹಿಸಬಹುದು. ಶುಕ್ರವಾರ ಮನೆಯಲ್ಲಿ ಳುಹ್‌ರ್ ನಮಾಝ್ ನಿರ್ವಹಿಸಬಹುದಾಗಿದೆ.

ಸೋಂಕು ಭೀತಿ ಕಾರಣ ಜುಮಾ, ಜಮಾಅತ್‌ನಲ್ಲಿ ಭಾಗವಹಿಸದವರು ಆಕ್ಷೇಪಾರ್ಹರಲ್ಲ. ಸೋಂಕು ಹರಡುವಿಕೆಯ ಭೀತಿ ಇರುವ ತನಕ ಈ ವಿನಾಯಿತಿ ಅನ್ವಯವಾಗಲಿದೆ. ಸುನ್ನಿ ಜಮೀಯ್ಯತುಲ್ ಉಲಮಾ ಕರ್ನಾಟಕ ನೀಡುವ ಸಲಹೆ- ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನರು ಸೇರುವುದನ್ನು ಸಾಧ್ಯವಾದಷ್ಟು ನಿಯಂತ್ರಣದಲ್ಲಿಡಲು ಸೇವಾ ತಂಡಗಳನ್ನು ರಚಿಸಬೇಕು.

ನಿಯಂತ್ರಣಾತೀತವಾಗಿ ಜನ ಸೇರುವ ಮಸೀದಿಗಳಲ್ಲಿ ಕಡ್ಡಾಯ ನಿಮಯ ಪಾಲನೆ ಅಸಾಧ್ಯವೆಂದು ಕಂಡುಬಂದಲ್ಲಿ ಸೋಂಕಿನ ಭೀತಿಯಿಂದ ಇನ್ನಷ್ಟು ಮುಕ್ತ ವಾತಾವರಣ ದೊರಕುವ ತನಕ ಮಸೀದಿಯ ಜುಮಾ, ಜಮಾಅತ್‌ಗಳನ್ನು ಮುಂದೂಡಬೇಕು ಎಂದು ಸುನ್ನಿ ಜಮೀಯ್ಯತುಲ್ ಉಲಮಾ ಕರ್ನಾಟಕದ ಅಧ್ಯಕ್ಷ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಕಾರ್ಯದರ್ಶಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸರಕಾರವು ಅನುಮತಿ ನೀಡಿರುವ ಕಾರಣ ಎಲ್ಲ ಮೊಹಲ್ಲಾಗಳಲ್ಲಿ ಜಮಾಅತ್‌ಗಳನ್ನು ಆರಂಭಿಸಲು ಯಾರೂ ಆದೇಶ ನೀಡುವಂತಹ ಮುಕ್ತ ಪರಿಸರವು ಇನ್ನೂ ನಿರ್ಮಾಣವಾಗಿಲ್ಲ. ಆದಾಗ್ಯೂ, ಮೊಹಲ್ಲಾಗಳಲ್ಲಿ ಜಮಾಅತ್ ಆರಂಭಿಸುವುದಾದಲ್ಲಿ ಈ ಕೆಳಗಿನ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

►ಅಂಗ ಶುದ್ಧಿಗಾಗಿ ಮಸೀದಿಯ ಹೌಳ್ (ನೀರಿನ ಟ್ಯಾಂಕ್) ಬಳಕೆಗೆ ಅವಕಾಶ ನೀಡದಿರುವುದು
►ಮನೆಯಲ್ಲಿಯೇ ಅಂಗ ಶುದ್ಧಿ ಮಾಡಿ ಮಸೀದಿಗೆ ಬರುವುದು
►ಅನಿವಾರ್ಯ ಸಂದರ್ಭ ನೀರು ಬಳಸಲು ಟ್ಯಾಪ್ ವ್ಯವಸ್ಥೆ ಮಾಡುವುದು, ಮಸೀದಿಯ ಪ್ರವೇಶಕ್ಕೆ ಮುನ್ನ ಸಾಬೂನು, ಸ್ಯಾನಿಟೈಝರ್ ವ್ಯವಸ್ಥೆ ಕಲ್ಪಿಸುವುದು
►ಮಸೀದಿಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಯಾರೂ ಬಳಸದೆ ಶೌಚದ ಅಗತ್ಯಗಳನ್ನು ಮನೆಯಲ್ಲೇ ಪೂರೈಸುವುದು
►ಮಸೀದಿಯ ಕಾರ್ಪೆಟ್‌ಗಳನ್ನು ತೆಗೆದಿಡುವುದು/ ತೆಗೆದು ತೊಳೆಯಲು ಸೌಕರ್ಯವಿರುವ ವಸ್ತ್ರಗಳಿಂದ ಅವುಗಳನ್ನು ಮುಚ್ಚುವುದು, ►ನಮಾಝ್ ‌ಗೆ ಬರುವವರು ಮನೆಯಿಂದ ಹಾಸು ವಸ್ತ್ರಗಳನ್ನು ತರುವುದು
►ನಮಾಝ್‌ನ ಸಾಲುಗಳ ಅಂತರ ಹೆಚ್ಚಿಸುವುದು, ಪರಸ್ಪರ ಸುರಕ್ಷಿತ ಅಂತರವಿಟ್ಟು ನಿಲ್ಲವುದು
►ಊರಿನ ಪರಿಚಿತರು ಮಾತ್ರವೇ ಜುಮಾ, ಜಮಾಅತ್‌ಗಳಲ್ಲಿ ಭಾಗವಹಿಸುವುದು
►ದಾರಿಹೋಕರು ಮಸೀದಿ ಬಳಸುವಂತಿಲ್ಲ
►ವೃದ್ಧರು, ಮಕ್ಕಳು, ರೋಗಿಗಳು ಮನೆಯಲ್ಲೇ ನಮಾಝ್ ನಿರ್ವಹಿಸುವುದು
►ಅಝಾನ್ ಮುಗಿದ ತಕ್ಷಣ ಮಸೀದಿ ತೆರೆಯುವುದು, ಹೆಚ್ಚು ವಿಳಂಬ ಮಾಡದೇ ಜಮಾಅತ್ ನಡೆಸಿ ತಕ್ಷಣ ಮಸೀದಿ ಮುಚ್ಚುವುದು, ರವಾತಿಬ್ ಸುನ್ನತ್ ನಮಾಝ್‌ಗಳನ್ನು ಮನೆಯಲ್ಲಿ ನಿರ್ವಹಿಸುವುದು
►ಶುಕ್ರವಾರ ಜುಮ್ಮಾ ಸಮಯಕ್ಕಿಂತ 10 ನಿಮಿಷ ಮುನ್ನ ಮಸೀದಿ ತೆರೆಯುವುದು, 20 ನಿಮಿಷಗಳಲ್ಲಿ ಜುಮ್ಮಾ ಮುಗಿಸುವುದು, ನಮಾಜ್‌ನ ನಂತರದ ದುಆ ಹೊರತಾದ ಹೆಚ್ಚುವರಿ ದುಆ, ಬೋಧನೆ ನಡೆಸದೆ ಜನರು ತಕ್ಷಣ ಮರಳಲು ಅವಕಾಶ ನೀಡುವುದು
►ಮಸೀದಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ದ್ಸಿಕ್ಸ್, ಸ್ವಲಾತ್ ಮಜ್‌ಲಿಸ್‌ಗಳನ್ನು ಸದ್ಯ ಮುಂದೂಡುವುದು, ಮನೆಯಲ್ಲಿ ಕುಟುಂಬದೊಂದಿಗೆ ನಿರ್ವಹಿಸುವುದು
►ಕೆಮ್ಮು, ಸೀನು, ನೆಗಡಿ ಮುಂತಾದ ರೋಗ ಇರುವವರು ಮನೆಯಲ್ಲಿ ನಮಾಝ್ ನಿರ್ವಹಿಸುವುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News