ವಿದ್ಯುತ್ ಬಿಲ್ ದೂರು: ತ್ವರಿತ ಸ್ಪಂದನೆಗೆ ಸಚಿವ ಕೋಟ ಸೂಚನೆ

Update: 2020-06-06 17:43 GMT

ಮಂಗಳೂರು, ಜೂ.6: ಲಾಕ್‌ಡೌನ್ ಅವಧಿಯಲ್ಲಿ ವಿದ್ಯುತ್ ಬಿಲ್ ಅಧಿಕ ಬಂದಿರುವುದಾಗಿ ಸಾರ್ವಜನಿಕರಿಂದ ವ್ಯಕ್ತವಾಗಿರುವ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್- ಎಪ್ರಿಲ್ ತಿಂಗಳ ಬಿಲ್‌ನ್ನು ಒಟ್ಟಿಗೆ ನೀಡಿರುವುದರಿಂದ ಬಿಲ್ಲಿನ ಮೊತ್ತ ಅಧಿಕವಾಗಿರುವುದು ಸಹಜ. ಆದರೆ, ಪ್ರತೀ ಯುನಿಟ್ ದರ ಲೆಕ್ಕ ಹಾಕುವಾಗ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರಿಂದ ಅತೃಪ್ತಿ ವ್ಯಕ್ತವಾಗಿವೆ. ಈ ನಿಟ್ಟಿನಲ್ಲಿ ಮೆಸ್ಕಾಂ ಸಾರ್ವಜನಿಕ ಕುಂದುಕೊರತೆ ಸಭೆಗಳನ್ನು ನಡೆಸಿ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು ಎಂದು ನಿರ್ದೇಶಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್., ಪ್ರತೀ ಮನೆಗೆ ಮೊದಲ 30 ಯುನಿಟ್‌ನಲ್ಲಿ ಪ್ರತೀ ಯುನಿಟ್‌ಗೆ ರೂ.3.70ರಂತೆ, ನಂತರದ 31ರಿಂದ 70 ಯುನಿಟ್ ರೂ.5.20, 101ರಿಂದ 200 ಯುನಿಟ್ ರೂ.6.75 ಹಾಗೂ 201ರ ಮೇಲಿನ ಯುನಿಟ್‌ಗಳಿಗೆ ರೂ.7.80ಗಳಂತೆ ಬಿಲ್ ಮಾಡಲಾಗುತ್ತಿದೆ. ಬಿಲ್ ನಿಗದಿತ ಶುಲ್ಕದಲ್ಲಿ 1 ಕೆವಿಗೆ ರೂ.60, 2ನೇ ಕೆವಿಗೆ ರೂ.70ರಂತೆ ದರ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗ್ರಾಹಕರು ಬಿಲ್ ಮೊತ್ತವನ್ನು ಕಂತುಗಳಾಗಿ ಪಾವತಿಸಬಹುದು. ಯಾವುದೇ ದೂರುಗಳಿಗೆ ಆಯಾ ಮೆಸ್ಕಾಂ ಉಪವಿಭಾಗದ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಬಹುದು. ಅಲ್ಲದೆ, ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡಿ ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ 9483041912ಗೆ ತಮ್ಮ ದೂರು ನೀಡಬಹುದು ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.

ಸಭೆಯಲ್ಲಿ ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಪದ್ಮಾವತಿ, ಮೇಯರ್ ದಿವಾಕರ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಮತ್ತಿತರರು ಉಪಸ್ಥಿತರಿದ್ದರು.

ಮೆಸ್ಕಾಂನಿಂದ ಮಳೆಗಾಲ ಸಿದ್ಧತೆ
ಮೆಸ್ಕಾಂನಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ (ಸಂಖ್ಯೆ 1912) ನಿರಂತರವಾಗಿ ಗ್ರಾಹಕರ ಅಹವಾಲುಗಳಿಗೆ ಸ್ಪಂದಿಸಲಿದ್ದು, ಇಲಾಖೆಯಿಂದ ಮಳೆಗಾಲದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ಮುಖ್ಯ ಅಭಿಯಂತರ ಮಂಜಪ್ಪ ತಿಳಿಸಿದ್ದಾರೆ.
ಮಳೆಗಾಲದ ವಿದ್ಯುತ್ ಜಾಲದ ನಿರ್ವಹಣೆಗೆ ಹಾಗೂ ತುರ್ತು ಸಂದರ್ಭಗಳಿಗೆ ಬೇಕಾಗುವ ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳು, ಇನ್ಸುಲೇಟರ್ ಮತ್ತಿತರ ಸಾಮಗ್ರಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಇಡಲಾಗಿದೆ ಎಂದು ಅವರು ಸಭೆಗೆ ಮಾಹಿತಿ ಒದಗಿಸಿದರು.

ಪ್ರತೀ ಉಪವಿಭಾಗದಲ್ಲಿ 10 ಕೆಲಸಗಾರರ ತಂಡವನ್ನು ತುರ್ತು ಕೆಲಸಗಳಿಗಾಗಿ ನಿಯೋಜಿಸಲಾಗಿದ್ದು, 1 ವಾಹನವನ್ನೂ ನಿಯೋಜಿಸಲಾಗಿದೆ. ಮಳೆಗಾಲದ ತುರ್ತು ಕಾಮಗಾರಿಗಳ ನಿರ್ವಹಣೆಗೆ ಅವಶ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ಗ್ಯಾಂಗ್‌ಮೆನ್‌ಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಸಾಮಾಜಿಕ ಜಾಲತಾಣ, ಸಹಾಯವಾಣಿಗಳ ಮೂಲಕವೂ ದೂರುಗಳಿಗೆ ತ್ವರಿತ ಪರಿಹಾರ ನೀಡಬೇಕು. ಬಿಲ್ ಮೊತ್ತವನ್ನು ಕಂತುಗಳಲ್ಲಿ ಕಟ್ಟಲು ಗ್ರಾಹಕರಿಗೆ ಅವಕಾಶ ನೀಡಬೇಕು.
- ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ವಿದ್ಯುತ್ ಗ್ರಾಹಕರಿಗೆ ನಿಗದಿತ ದರದಲ್ಲಿಯೇ ಬಿಲ್ ನೀಡಲಾಗಿದೆ. ಯಾವುದೇ ಲೋಪವಾಗಿಲ್ಲ. ಬಡ್ಡಿ ಕೂಡ ಹಾಕಿಲ್ಲ. ಹೆಚ್ಚುವರಿಯಾಗಿ ಬಿಲ್‌ನಲ್ಲಿ ಮೊತ್ತ ನಮೂದಿಸಿದ್ದರೆ, ಮುಂದಿನ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿ ಕೊಡಲಾಗುವುದು.
-ಸ್ನೇಹಲ್ ಆರ್.,ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News