ಪಡುಬಿದ್ರಿ: ಕೊರೋನ ಪಾಸಿಟಿವ್ ವ್ಯಕ್ತಿಯ ಆಸ್ಪತ್ರೆಗೆ ಕೊಂಡೊಯ್ಯಲು ವಿಳಂಬ; ಸ್ಥಳೀಯರ ಅಸಮಾಧಾನ

Update: 2020-06-06 17:55 GMT

ಪಡುಬಿದ್ರಿ: ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ 14 ದಿನ ಕ್ವಾರೆಂಟೈನ್‍ಗೆ ಒಳಪಟ್ಟು ಮನೆಗೆ ಬಂದಿದ್ದ ವ್ಯಕ್ತಿಯ ಕೋವಿಡ್-19 ವರದಿಯಲ್ಲಿ ಶುಕ್ರವಾರ ಪಾಸಿಟಿವ್ ಬಂದಿದ್ದು, ಹೋಂ ಕ್ವಾರಂಟೈನ್‍ನಲ್ಲಿದ್ದ ಈ ವ್ಯಕ್ತಿಯನ್ನು ಶನಿವಾರ ಮಧ್ಯಾಹ್ನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. 

ಉಚ್ಚಿಲ ಪೊಲ್ಯ ರಸ್ತೆಯ ಅಪಾರ್ಟ್‍ಮೆಂಟ್ ಒಂದರಲ್ಲಿ ವಾಸವಾಗಿದ್ದ ಈ ವ್ಯಕ್ತಿಯ ವರದಿ ಪಾಸಿಟಿವ್ ಆಗಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರ ಅಪಾರ್ಟ್‍ಮೆಂಟ್‍ನ್ನು ಸೀಲ್‍ಡೌನ್ ಮಾಡಲಾಗಿತ್ತು. ಆದರೆ ಶನಿವಾರ ಬೆಳಗ್ಗೆ ವರೆಗೂ ಸೋಂಕಿತನನ್ನು ಆಸ್ಪತ್ರೆಗೆ ಸಾಗಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸೀಲ್‍ಡೌನ್ ಆಗಿರುವ ಅಪಾಟ್‍ಮೆಂಟ್‍ನ 7 ಕುಟುಂಬಸ್ಥರು ಮನೆ ಖಾಲಿ ಮಾಡಿದ್ದಾರೆ. ಸ್ಥಳೀಯರ ವಿರೋಧ ತೀವ್ರಗೊಳ್ಳುತಿದ್ದಂತೆಯೇ ಶನಿವಾರ ಮಧ್ಯಾಹ್ನ ಆಂಬುಲೆನ್ಸ್ ಮೂಲಕ ಸೋಂಕಿತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. 

ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನನ್ನ ಗಂಡನಿಗೆ ಕೊರೋನ ಪಾಸಿಟಿವ್ ಇದೆ ಎಂದು ತಿಳಿಸಿದ ಅಧಿಕಾರಿಗಳು ಸಂಜೆ ಅಪಾರ್ಟ್‍ಮೆಂಟ್ ಸೀಲ್‍ಡೌನ್ ಮಾಡಿ ಹೋಗಿದ್ದಾರೆ. ಶನಿವಾರ ಮಧ್ಯಾಹ್ನವಾದರೂ ನನ್ನ ಗಂಡನನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ನಡೆದಿಲ್ಲ. ನಮಗೆ ಹೊಟ್ಟೆಗೆ ಅನ್ನ ಅಹಾರ ಇಲ್ಲದೆ ನಾವು ಪಕ್ಕದ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದಿದ್ದೇವೆ. ಸ್ಥಳೀಯ ಪಂಚಾಯಿತಿ ಅಧಿಕಾರಿಗಳಾಗಲಿ ಅಥವಾ ಇನ್ನಿತರ ಯಾವುದೇ ಇಲಾಖೆ ನಮ್ಮ ಬಗ್ಗೆ ಗಮನ ಹರಿಸಿಲ್ಲ ಎಂದು ಅವರ ಪತ್ನಿ ಆರೋಪಿಸಿದ್ದಾರೆ.

ಸ್ಥಳದಲ್ಲಿ ಗೊಂದಲ: ಪಾಸಿಟಿವ್ ಬಂದಿದ್ದ ವ್ಯಕ್ತಿ ಮನೆಯಲ್ಲೇ ಉಳಿದಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಿದ್ದರು. ಮಾಹಿತಿಯನ್ನು ಪಡೆದುಕೊಂಡರು. 

ಈ ವೇಳೆ ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ, ಸರ್ಕಾರದ ಸಂಪೂರ್ಣ ವೈಫಲ್ಯದಿಂದಾಗಿ ಇಂತಹ ಗೊಂದಲ ನಿರ್ಮಾಣವಾಗಿದೆ ಎಂದು ದೂರಿದ್ದಾರೆ. ಈ ವೇಳೆ ಅಲ್ಲಿದ್ದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಕೇಸರಿ ಯು, ಇದರಲ್ಲಿ ಸರ್ಕಾರದ ಯಾವುದೇ ವೈಫಲ್ಯವಿಲ್ಲ. ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದರು. ಇದರಿಂದ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.

ಸಹಾಯಕ್ಕೆ ಧಾವಿಸಿದ ತಾಪಂ ಸದಸ್ಯ ಶೇಖಬ್ಬ: ನಿನ್ನೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ. ಅವರಿಗೆ ಬೇಕಾದ ಅಹಾರದ ವ್ಯವಸ್ಥೆಯನ್ನು ಮಾಡಿರಲಿಲ್ಲ. ಈ ವೇಳೆ ತಾಲ್ಲೂಕು ಪಂಚಾಯಿತಿ ಸದಸ್ಯ ಶೇಖಬ್ಬ ಬೆಳಗ್ಗೆ ವಿಷಯ ತಿಳಿದು ಬೆಳಿಗ್ಗಿನ ಉಪಹಾರ ವ್ಯವಸ್ಥೆಯನ್ನು ಮಾಡಿದ್ದರು. ಅಲ್ಲದೆ ಅವರಿಗೆ ಬೇಕಾದ ದಿನಬಳಕೆಯ ಸಾಮಾಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News